ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಓದುಗರಿಗೆ ಹಾಗೂ ಐ.ಎ.ಎಸ್, ಕೆ.ಎ.ಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಭ್ಯರ್ಥಿಗಳಿಗೆ ನೆರವಾಗುವಂತಹ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರವನ್ನೊಳಗೊಂಡ ಸುಸಜ್ಜಿತ ಗ್ರಂಥಾಲಯ ಸೌಲಭ್ಯವನ್ನು ಇನ್ನೂ ೫ ರಿಂದ ೬ ತಿಂಗಳೊಳಗೆ ಕಲ್ಪಿಸಲು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಸಂಬಂಧ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಗ್ರಂಥಾಲಯ, ಇನ್ನಿತರ ಮೂಲಸೌಕರ್ಯ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಕೇಂದ್ರವಾದ ನಗರದಲ್ಲಿ ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆಗೆ ಅಣಿಗೊಳ್ಳುವ ಅಭ್ಯರ್ಥಿಗಳು ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಲು ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರವನ್ನು ಒದಗಿಸಬೇಕಿದೆ. ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರಕ್ಕೆ ಪೂರಕವಾಗಿರುವ ವ್ಯವಸ್ಥೆಗಳು ಗ್ರಂಥಾಲಯ ಕಟ್ಟಡದಲ್ಲಿ ಇರಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದಲ್ಲಿ ಪರೀಕ್ಷೆಗೆ ಸಿದ್ದರಾಗುವ ಅಭ್ಯರ್ಥಿಗಳಿಗೆ ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಬೋಧನೆ ತರಬೇತಿಗೆ ಅನುಕೂಲವಾಗುವ ಸಭಾಂಗಣವನ್ನೂ ಸಹ ನಿರ್ಮಿಸಬೇಕು. ಎಲ್ಲಾ ಅನುಕೂಲಗಳುಳ್ಳ ಗ್ರಂಥಾಲಯವನ್ನು ನಿರ್ಮಿಸುವ ಸಂಬಂಧ ಅಗತ್ಯ ಪ್ರಕ್ರಿಯೆಗೆ ಕಾರ್ಯೋನ್ಮುಖರಾಗಬೇಕು ಎಂದು ಸಚಿವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲು ನಗರೋತ್ಥಾನ ೪ನೇ ಹಂತದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಗರೋತ್ಥಾನದಡಿ ನಿರ್ವಹಿಸಲಾಗುವ ಕಾಮಗಾರಿಯು ಗುಣಮಟ್ಟದ್ದಾಗಿರಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಕಾಮಗಾರಿಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.
ವಸತಿ ಯೋಜನೆಯಡಿಯಲ್ಲಿ ನೀಡಲಾದ ಗುರಿಗೆ ಅನುಗುಣವಾಗಿ ತುರ್ತಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಆಧಾರ್ ಪ್ರತಿಯೊಂದಿಗೆ ಫಲಾನುಭವಿಗಳ ಪಟ್ಟಿಯನ್ನು ಫೆಬ್ರವರಿ ೨೮ರೊಳಗೆ ಇಲಾಖೆಗೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಚಾಮರಾಜನಗರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಮನೆ ಕಳೆದುಕೊಂಡಿರುವವರಿಗೆ ನಿವೇಶನ ನೀಡಲಾಗಿದ್ದು ಅವರಿಗೆ ಮನೆ ನಿರ್ಮಿಸಲು ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನಿರ್ದೇಶನ ನೀಡಿದರು.
ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್‌ಕುಮಾರ್ ಎಸ್. ಹೊಸಮನಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಕಾರ್ಯಪಾಲಕ ಎಂಜಿನಿಯರ್ ವರದರಾಜು, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಸುರೇಂದ್ರ, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಆರ್. ಶಿವಸ್ವಾಮಿ, ಗುಂಡ್ಲುಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.