ಗುಂಡ್ಲುಪೇಟೆ: ಪಠ್ಯ ಪುಸ್ತಕದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿರುವುದು ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕವು ಸರ್ವಧರ್ಮ, ಸಂಸ್ಕøತಿಯ ನಾಡಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗು ಸಮಾನ ಹಕ್ಕಿದೆ. ಇದನ್ನು ಮನಗಾಣದೆ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ರಾಜ್ಯ ಚುನಾವಣೆ ಒಂದು ವರ್ಷ ಇರುವಾಗಲೇ ತಿಂಗಳಿಗೊಂದು ವಿಷಯಗಳ ಎತ್ತಿಕೊಂಡು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತ ಜನ ಸಾಮಾನ್ಯರಿಗೆ ಸ್ಪಂದಿಸದೆ ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡದೆ ನಿರಂತರವಾಗಿ ಭ್ರಷ್ಟಾಚಾರ ನಡೆಸಿ ಜನರ ಜೀವ ಹಿಂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಪಠ್ಯ ಪುಸ್ತಕದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್, ಗೂಡ್ಸೆ, ಚಕ್ರವರ್ತಿ ಸೂಲಿಬೆಲಿ ಅಂತವರ ವಿಚಾರ ಧಾರೆಗಳನ್ನು ಬಲವಂತವಾಗಿ ಪಠ್ಯದಲ್ಲಿ ತುರುಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವರಿಂದ ರಾಜ್ಯ ಹಾಗು ದೇಶಕ್ಕೆ ಏನು ಕೊಡುಗೆ ಇದೆ ಎಂಬುದನ್ನು ಬಿಜೆಪಿ ಪಕ್ಷದವರು ತಿಳಿಸಬೇಕು. ಅಂತವರ ಅವಶ್ಯಕತೆ ಬಿಜೆಪಿಗೆ ಇದ್ದರೆ ತಮ್ಮ ಪಕ್ಷದ ವೇದಿಕೆಯಲ್ಲಿ ಅವರ ಭಾವ ಚಿತ್ರ ಪ್ರದರ್ಶಿಸಿ ಮತ ಕೇಳಲಿ. ಇದಕ್ಕೆ ಪ್ರಜ್ಞಾವಂತ ನಾಗರೀಕರು ತಕ್ಕ ಪಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಪಠ್ಯದ ಮುದ್ರಣವನ್ನು ತಕ್ಷಣ ತಡೆ ಹಿಡಿದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೋಳ್ಳಬೇಕು. ಜೊತೆಗೆ ಒಂದನೇ ತರಗತಿಯಿಂದ ಪಠ್ಯ ಪುಸ್ತಕದಲ್ಲಿ ಸಂವಿಧಾನ ಹಾಗೂ ಕಾನೂನಿನ ಪಾಠವನ್ನು ಹಂತ ಹಂತವಾಗಿ ಸೇರಿಸಬೇಕು ಎಂದು ಮನವಿ ಮಾಡಿದರು.

ವರದಿ: ಬಸವರಾಜು ಎಸ್.ಹಂಗಳ