ಚಾಮರಾಜನಗರ: ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರದ ವಿನೂತನ ಮೈತ್ರಿ ಮುಟ್ಟಿನ ಕಪ್ (ಮೆನ್ಸ್‌ಟ್ರುಯೆಲ್ ಕಪ್) ಯೋಜನೆಗೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಚಾಲನೆ ನೀಡಿದರು.
ಇದೇ ವೇಳೆ ಮೈತ್ರಿ ಮುಟ್ಟಿನ ಕಪ್ ಯೋಜನೆಯ ಕುರಿತು ಜಾಗೃತಿ ಮೂಡಿಸುವ ವೀಡಿಯೋ ಅನ್ನು ಸಚಿವರು ಬಿಡುಗಡೆ ಮಾಡಿದರು. ಬಳಿಕ ಕಿರು ಅವಧಿಯ ವೀಡಿಯೋ ಪ್ರದರ್ಶಿಸಲಾಯಿತು. ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ಅನ್ನು ಗಣ್ಯರು ವಿತರಿಸಿದರು. ಯೋಜನೆಯ ಕುರಿತ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ವೇದನೆ, ನೋವು ಅರ್ಥ ಮಾಡಿಕೊಂಡು ಅವರಿಗಾಗಿ ರೂಪಿಸಿರುವ ಮೈತ್ರಿ ಮುಟ್ಟಿನ ಕಪ್ ಯೋಜನೆ ಅತ್ಯುತ್ತಮ ಕೊಡುಗೆಯಾಗಿದೆ. ರಾಜ್ಯದ ಹಲವು ಯೋಜನೆಗಳ ಪೈಕಿ ಅತ್ಯಂತ ಒಳ್ಳೆಯ ಯೋಜನೆಯಾಗಿರುವ ಇದನ್ನು ಜಿಲ್ಲೆಯ ಪವಿತ್ರ ಸ್ಥಳದಲ್ಲಿ ಚಾಲನೆ ನೀಡಿರುವುದಕ್ಕೆ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮೈತ್ರಿ ಮುಟ್ಟಿನ ಕಪ್ ಯೋಜನೆ ಹೆಣ್ಣು ಮಕ್ಕಳಿಗೆ ಧೈರ್ಯ ಸ್ತೈರ್ಯ ತುಂಬುವಲ್ಲಿ ಮುಖ್ಯವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ರಾಜ್ಯವು ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಅತ್ಯುತ್ತಮ ಯೋಜನೆಯನ್ನು ಹೆಣ್ಣು ಮಕ್ಕಳಿಗೆ ಮನ ಮುಟ್ಟುವಂತೆ ತಲುಪಿಸಿ ಗೆಲ್ಲುವ ಕೆಲಸ ಈ ಯೋಜನೆಗೆ ನಿಯೋಜಿತರಾಗಿರುವ ರಾಯಭಾರಿಗಳಾಗಿದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಮೈತ್ರಿ ಕಪ್ ಯೋಜನೆ ಕುರಿತು ತಿಳಿವಳಿಕೆ ನೀಡುವ ಉತ್ತಮ ವೀಡಿಯೋ ತಯಾರು ಮಾಡಲಾಗಿದೆ. ಈ ಯೋಜನೆ ಪ್ರತೀ ಹಳ್ಳಿ ಹಳ್ಳಿಗೆ ತಲುಪಿಸಬೇಕು. ಆರೋಗ್ಯ ಇಲಾಖೆ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ಬಳಕೆಯ ಸದುಪಯೋಗದ ಬಗ್ಗೆ ತಿಳಿವಳಿಕೆ ನೀಡಬೇಕು. ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಕಡೆ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ಕಾರ್ಯಕರ್ತರ ನೆರವಿನೊಂದಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಯೋಜನೆಯ ಅನುಷ್ಠಾನದ ಬಗ್ಗೆ ವಿಶೇಷ ಗಮನ ನೀಡಬೇಕು. ಎಲ್ಲಾ ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಯೋಜನೆ ತಲುಪಬೇಕು. ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.
ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಮಾತನಾಡಿ ಋತುಚಕ್ರ ಎಂಬುದು ಹೆಣ್ಣು ಮಕ್ಕಳ ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ನಿರಂತರ ಪ್ರಕ್ರಿಯೆ. ಈ ಬಗ್ಗೆ ಹೆಣ್ಣು ಮಕ್ಕಳು ಆತಂಕ ಮುಜುಗರಕ್ಕೆ ಒಳಗಾಗಬೇಕಿಲ್ಲ. ಋತುಸ್ರಾವ ಸಂದರ್ಭದಲ್ಲಿ ಅವರು ಶುಚಿತ್ವ ಹಾಗೂ ಆರೋಗ್ಯ ಹಿತ ದೃಷ್ಠಿಯಿಂದ ಪರಿಸರ ಸ್ನೇಹಿಯಾಗಿರುವ ಹಾಗೂ ಸುಲಭ ನಿರ್ವಹಣೆಯ ಮೈತ್ರಿ ಮುಟ್ಟಿನ ಕಪ್ ಅನ್ನು ವಿತರಿಸುವ ಈ ಸರ್ಕಾರದ ಯೋಜನೆ ಹೆಣ್ಣು ಮಕ್ಕಳ ಹೃದಯ ಮುಟ್ಟುವ ಯೋಜನೆಯಾಗಿದೆ ಎಂದರು.
ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಕಾಳಜಿ ಹೊಂದಿ ಮಾತೃ ಹೃದಯ ಇಟ್ಟುಕೊಂಡಿರುವ ಸರ್ಕಾರ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲೇ ಮಹತ್ತರ ಯೋಜನೆಗೆ ಚಾಲನೆ ನೀಡಿದೆ. ಸಮಾಜದ ಕಟ್ಟ ಕಡೆಯ ಜನರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದೊಂದಿಗೆ ಚಾಮರಾಜನಗರ ಜಿಲ್ಲೆಯನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಈ ವಿಶಿಷ್ಟ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಮೈತ್ರಿ ಮುಟ್ಟಿನ ಕಪ್ ಅನ್ನು ೬ ರಿಂದ ೧೦ ವರ್ಷದ ವರೆಗೆ ಮರು ಬಳಕೆ ಮಾಡಬಹುದಾಗಿದೆ. ಇದರ ದರವು ಕಡಿಮೆಯಿದೆ. ಆದರೆ ರಾಜ್ಯ ಸರ್ಕಾರ ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತವಾಗಿ ನೀಡಲಿದೆ. ಯೋಜನೆಯ ಬಗ್ಗೆ ರಾಯಭಾರಿಗಳಾಗಿ ನಿಯೋಜನೆಗೊಂಡಿರುವವರು ಹೆಚ್ಚಿನ ವಿದ್ಯಾಲಯಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕಿದೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ವಿಶೇಷವಾಗಿ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಆರೋಗ್ಯಯುತವಾದಾಗ ದೇಶ ರಾಜ್ಯ ಶ್ರೀಮಂತವಾಗುತ್ತದೆ. ನಮ್ಮ ನಾಡನ್ನು ಆರೋಗ್ಯ ನಾಡನ್ನಾಗಿಸುವ ಮತ್ತು ಎಲ್ಲರ ಆರೋಗ್ಯ ಕಾಪಾಡುವ ಕರ್ತವ್ಯವನ್ನು ಬದ್ದತೆ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದರು.

ಇಲ್ಲಿನ ಆದಿವಾಸಿ ಬುಡಕಟ್ಟು ಸೋಲಿಗ ಸಮುದಾಯದ ಹೆಣ್ಣು ಮಕ್ಕಳಿಗೆ ನರ್ಸಿಂಗ್ ಹಾಗೂ ಆಶಾ ಕಾರ್ಯಕರ್ತೆಯರ ನೇಮಕಾತಿಗೆ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಶಾಸಕರಾದ ಎನ್ ಮಹೇಶ್ ಅವರ ಮನವಿಯಂತೆ ಯಳಂದೂರು ತಾಲೂಕು ಆಸ್ಪತ್ರೆ ಕಾಮಗಾರಿಯನ್ನು ಶೀಘ್ರದಲ್ಲೆ ಆರಂಬಿಸಲಾಗುವುದು. ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವರಾದ ವಿ. ಸುಧಾಕರ್ ಅವರು ತಿಳಿಸಿದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಹೆಣ್ಣು ಮಕ್ಕಳ ಅಭ್ಯುದಯಕ್ಕೆ ಅನೇಕರು ಕಾರಣರಾಗಿದ್ದಾರೆ. ಪ್ರಪ್ರಥಮ ಬಾರಿಗೆ ಹೆಣ್ಣು ಮಕ್ಕಳಿಗೆ ಶಾಲೆ ತೆರೆದವರು ಮಾತೆ ಸಾವಿತ್ರಿಬಾಯಿ ಬಾಪುಲೆ ಅವರು. ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಠಿಯಿಂದ ಹೆಣ್ಣು ಗಂಡು ಸಮಾನವಾಗಿ ಬದುಕಲು ಕಾರಣವಾಗಿದೆ. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಭರವಸೆ ಧೈರ್ಯ ಮೂಡಿಸುವ ಅದ್ಭುತ ಮೈತ್ರಿ ಯೋಜನೆಯನ್ನು ಜಾರಿಗೆ ತಂದಿರುವುದು ಮೈಲಿಗಲ್ಲಾಗಿದೆ ಎಂದರು.
ಯಳಂದೂರು ನೂತನ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಯಳಂದೂರಿಗೆ ೩ ಡಯಾಲಿಸಿ ಯಂತ್ರಗಳು ಹಾಗೂ ಕೊಳ್ಳೇಗಾಲ ಆಸ್ಪತ್ರೆಗೆ ಹೆಚ್ಚುವರಿಯಾಗಿ ೪ ಡಯಾಲಿಸಿಸ್ ಯಂತ್ರಗಳನ್ನು ನೀಡಬೇಕು. ಉಮ್ಮತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರಾದ ಎನ್ ಮಹೇಶ್ ಅವರು ಆರೋಗ್ಯ ಸಚಿವರಿಗೆ ಮನವಿ ಮಾಡಿದರು.
ಮೈತ್ರಿ ಮುಟ್ಟಿನ ಕಪ್ ಯೋಜನೆಯ ರಾಯಭಾರಿಗಳಾದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ವೇದಾ ಕೃಷ್ಣಮೂರ್ತಿ, ಖ್ಯಾತ ಚಲನಚಿತ್ರ ನಟಿ ಅಮೃತ ಅಯ್ಯಂಗಾರ್ ಅವರು ಮಾತನಾಡಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ ನಾಗೇಶ್, ಉಪಾಧ್ಯಕ್ಷರಾದ ಪ್ರತಿಪ್ ಕುಮಾರ್, ಜಿಲ್ಲಾ ಬುಡಕಟ್ಟು ಅಭಿವೃದ್ದಿ ಸಂಘದ ಅಧ್ಯಕ್ಷರಾದ ಸಿ. ಮಹದೇವು, ತಾಲೂಕು ಸೋಲಿಗರ ಅಭಿವೃದ್ದಿ ಸಂಘದ ಅಧ್ಯಕ್ಷರಾದ ದಾಸೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ. ರಂದೀಪ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಎಂ. ಇಂದುಮತಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಜಿ.ಎನ್. ಶ್ರೀನಿವಾಸ್, ಡಾ. ಬಿ.ವೀಣಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.