* ಸುಧಾಮೂರ್ತಿ ಅವರಿಗೆ ಕರೆ ಮಾಡಿ ಅಭಿನಂದನೆ

* ಖಾಸಗಿಯಾಗಿ ಕೆರೆ ಅಭಿವೃದ್ಧಿ, ನಿರ್ವಹಣೆ ಬಗ್ಗೆ ಉಸ್ತುವಾರಿ ಸಚಿವರ ಮೆಚ್ಚುಗೆ

* 105 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯುತ್ತಮವಾಗಿ ನಿರ್ವಹಣೆ

* ತ್ಯಾಜ್ಯ ನೀರು ಸೇರದಂತೆ ಕ್ರಮ; ಉಸ್ತುವಾರಿ ಸಚಿವರು

* ತ್ಯಾಜ್ಯ ನೀರು ಶುದ್ದೀಕರಣ ಘಟಕದ ನಿರ್ವಹಣೆ ಬಗ್ಗೆ ಶ್ಲಾಘನೆ

ಮೈಸೂರು: ಒಂದು ನಗರ ಶುದ್ಧವಾಗಿ ಇರಬೇಕೆಂದರೆ ಶುದ್ಧ ಗಾಳಿ ಬರಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಇನ್ಫೋಸಿಸ್ ವತಿಯಿಂದ ಹೆಬ್ಬಾಳು ಕೆರೆಯನ್ನು ಅತ್ಯುತ್ತಮವಾಗಿ, ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ ಅವರಿಗೆ ಪೌರ ಸನ್ಮಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಹೊರವಲಯದಲ್ಲಿರುವ ಹೆಬ್ಬಾಳು ಕೆರೆಯನ್ನು ವೀಕ್ಷಣೆ ಮಾಡಿದ ಸಚಿವರು, 2.2 ಕೀ.ಮೀ. ಸುತ್ತಳತೆಯುಳ್ಳ 54 ಎಕರೆ ವಿಸ್ತೀರ್ಣದ ವ್ಯಾಪ್ತಿಯೊಳಗೆ ಕೆರೆ ಇದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಆರ್ ಎಫ್ ವತಿಯಿಂದ ಸುಮಾರು 105 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಮಾದರಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಚಿಂತನೆ; ಎಸ್ ಟಿ ಎಸ್

ಇದೇ ರೀತಿ ಸಿ ಎಸ್ ಆರ್ ಫಂಡ್ ಎಲ್ಲೆಲ್ಲಿ ಇದೆಯೋ ಅವುಗಳನ್ನು ಬಳಸಿಕೊಂಡು ಪಾರ್ಕ್, ಕೆರೆ ಸೇರಿದಂತೆ ಇನ್ನಿತರ ಕಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಇಷ್ಟು ಸುಂದರವಾಗಿ ಕೆಲಸವಾಗುವುದನ್ನು ಗಮನಿಸಿದಾಗ ಇಂತಹ ಅನುದಾನಗಳು ಪಾರ್ಕ್, ಕೆರೆಗಳ ಅಭಿವೃದ್ಧಿಗಾಗಿಯೇ ಬಳಸಿದರೆ ಉತ್ತಮ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರಾದ ಮಾಧುಸ್ವಾಮಿ ಅವರಿಂದ ಶೀಘ್ರ ಭೇಟಿ

ಕೆರೆಗಳ ಒತ್ತುವರಿ ಸಂಬಂಧ ಸಚಿವರಾದ ಮಾಧುಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಅವರು ಬಜೆಟ್ ಗಿಂತ ಮುಂಚಿತವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಸಂಬಂಧ ಅವರೇ ಆದೇಶ ನೀಡಲಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಚಂಡೀಗಡ ಬಿಟ್ಟರೆ ಮೈಸೂರಲ್ಲೇ ವಿಶಾಲ ಕೆರೆ; ಸಚಿವರ ಮೆಚ್ಚುಗೆ

ಚಂಡೀಗಡದಲ್ಲಿ ಇದೇ ಮಾದರಿಯ ಕೆರೆ ಇದ್ದು, ನೋಡಲು ಮನಮೋಹಕವಾಗಿದೆ. ಅಲ್ಲೂ ಸಹ ಸುಮಾರು 5-6 ಕಿ.ಮೀ. ವಿಸ್ತೀರ್ಣವುಳ್ಳ ಜಾಗದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಟ್ಟು ಮೂಲಸೌಕರ್ಯ ಒದಗಿಸಿ ನಿರ್ಮಿಸಲಾಗಿದೆ. ಅಂಥದ್ದೇ ಮಾದರಿಯ ಕೆರೆಯನ್ನು ನಾನು ಮೈಸೂರಿನಲ್ಲಿಯೇ ನೋಡುತ್ತಿದ್ದೇನೆ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

ತ್ಯಾಜ್ಯ ನೀರು ಸೇರದಂತೆ ಕ್ರಮ; ಉಸ್ತುವಾರಿ ಸಚಿವರು

ಹೆಬ್ಬಾಳು ಕೆರೆಗೆ ಕೆಲವು ತ್ಯಾಜ್ಯ ಹಾಗೂ ರಾಸಾಯನಿಕ ನೀರುಗಳು ಸೇರುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗ ತಾನೇ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಆದೇಶ ನೀಡಲಾಗುವುದು ಎಂದು ತಿಳಿಸಿದರು.

ಸುಧಾಮೂರ್ತಿ ಅವರಿಗೆ ಕರೆ ಮಾಡಿ ಅಭಿನಂದನೆ

ಇದೇ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರಿಗೆ ಸ್ಥಳದಲ್ಲಿಯೇ ಕರೆ ಮಾಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಹೆಬ್ಬಾಳು ಕೆರೆಯ ಸಂಪೂರ್ಣ ಅಭಿವೃದ್ಧಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಇಂಥ ಒಂದು ಅದ್ಭುತ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಕ್ಕೆ ಮೈಸೂರಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಸಚಿವರು, ಇಂತಹ ಒಂದು ಕಾರ್ಯಕ್ಕೆ ತಮಗೆ ಮೈಸೂರಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಸಮಯ, ದಿನಾಂಕ ನೋಡಿಕೊಂಡು ತಮಗೆ ತಿಳಿಸಲಾಗುವುದು ಎಂದು ಸುಧಾಮೂರ್ತಿ ಅವರಿಗೆ ತಿಳಿಸಿದರು. ಇದಕ್ಕೆ ಅವರೂ ಒಪ್ಪಿಕೊಂಡಿದ್ದಾಗಿ ಮಾಹಿತಿ ನೀಡಿದರು.

ಒಟ್ಟಾರೆ 105 ಕೋಟಿ ರೂಪಾಯಿ ಪ್ಲ್ಯಾನ್

ಹೆಬ್ಬಾಳು ಕೆರೆ, ಸುತ್ತಮುತ್ತಲ ಜಾಗ, ರಸ್ತೆಗಳು ಹಾಗೂ ಎಸ್ ಟಿ ಪಿ (ತ್ಯಾಜ್ಯ ನೀರಿನ ಶುದ್ದೀಕರಣ ಘಟಕ) ದ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಒಟ್ಟಾರೆ 105 ಕೋಟಿ ರೂಪಾಯಿ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಸಚಿವರಾದ ಸೋಮಶೇಖರ್ ಅವರಿಗೆ ಇನ್ಫೋಸಿಸ್ ನ ಇಂಜಿನಿಯರ್ ಮಾಹಿತಿ ನೀಡಿದರು. ಇದೇ ವೇಳೆ ಹೆಬ್ಬಾಳು ಕೆರೆಯ ನೀಲನಕ್ಷೆಯನ್ನು ಸಚಿವರು ವೀಕ್ಷಿಸಿದರು.

ಎಸ್ಪಟಿ ಪಿ ಪ್ಲ್ಯಾಂಟ್ ಬಗ್ಗೆ ಮೆಚ್ಚುಗೆ

ಹೆಬ್ಬಾಳು ಕೆರೆಯ ಪಕ್ಕದಲ್ಲಿರುವ ಎಸ್ಪಟಿ ಪಿ ಪ್ಲ್ಯಾಂಟ್ ಗೆ ಭೇಟಿ ನೀಡಿದ ಸಚಿವರಾದ ಸೋಮಶೇಖರ್ ಅವರು, ತ್ಯಾಜ್ಯ ನೀರಿನ ಶುದ್ದೀಕರಣ ಮಾಡುವ ಎಲ್ಲ ಪ್ರಕ್ರಿಯೆಗಳನ್ನು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಇಂತಹ ಸಮಾಜಮುಖಿ ಕಾರ್ಯದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ಫೋಸಿಸ್ ವತಿಯಿಂದ 5 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು, ಕೊಳಚೆ ನೀರನ್ನು ಶುದ್ದೀಕರಿಸಿ ಕೆರೆಗೆ ಬಿಡುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಬೇಕಾದ ಎಲ್ಲ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ಇನ್ಫೋಸಿಸ್ ವತಿಯಿಂದಲೇ ಒದಗಿಸಿ ನಿರ್ವಹಿಸಲಾಗುತ್ತಿದೆ ಎಂದು ಇನ್ಫೋಸಿಸ್ ಇಂಜಿನಿಯರ್ ಗಳು ಸಚಿವರಾದ ಸೋಮಶೇಖರ್ ಅವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಮುಡಾ ಆಯುಕ್ತರಾದ ನಟೇಶ್, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

By admin