ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಅನುಕರಣೆ ಅನುಸರಣೆಯೂ ಹೌದು.ಅನುಕರಣೆಯಿಂದಲೇ ಜಗದ ಅಪಾರತೆ ಯುಗವನ್ನು ಮುಟ್ಟಲು ಅನುವಾಗುತ್ತಿದೆ.ಹಾಗೆಂದು ಈ ಸೃಷ್ಟಿಯಲ್ಲಿ ಎಲ್ಲವೂ ಅನುಕರಣೆಗೆ ಯೋಗ್ಯತೆಯನ್ನು ಹೊಂದಿಲ್ಲ.ಕಾರಣವಿಷ್ಟೇ ಕೆಲವುಗಳ ಅನುಕರಣೆಯಿಂದ ಅಪಾಯತೆ ಹೆಚ್ಚು.ಎಲ್ಲರಿಗೂ ಈ ರೀತಿ ಆಗುವುದು ಸಹಜ.ಎಂದಿಗೂ ನಮ್ಮ ಬಳಿ ಇರುವಂತದ್ದು ಎಷ್ಟೇ ಮೌಲ್ಯವಿದ್ದರೂ ಅದರ ನಿಜತೂಕ ನಮಗೆ ತಿಳಿಯುವುದಿಲ್ಲ ಹಾಗೂ ಅದರ ಮೇಲೆ ವ್ಯಾಮೋಹ ಕಡಿಮೆಯೇ ಇರುತ್ತದೆ.

ಆದರೆ ಇನ್ನೊಬ್ಬರ ಬಳಿ ಇರುವ, ಬೆಲೆ ಇರದ ವಸ್ತುವಿಗೆ ನಮ್ಮಲ್ಲಿ ಬೆಲೆಕಟ್ಟಲಾಗದ ಜಾಗವನ್ನು, ಹಂಬಲವನ್ನು ಕೊಟ್ಟಿರುತ್ತೇವೆ.ಇದೇ ವಿಪರ್ಯಾಸ‌ವಿರಬೇಕು.ಈ‌ ಸರಳ ಉದಾಹರಣೆಯನ್ನು  ಭಾರತದ ಬಹುದೊಡ್ಡ ಅಪಾಯತೆಯನ್ನು ತಿಳಿಸಲು ಹೇಳಿದೆಯಷ್ಟೇ.ಇಡೀ ಪ್ರಪಂಚವೇ ಭಾರತದ ಭವ್ಯ ಸಂಸ್ಕೃತಿಯನ್ನು ಒಪ್ಪುತ್ತದೆ.ಮೇಲ್ನೋಟಕ್ಕೆ ತಿರಸ್ಕರಿಸಿದರು ಅಂತರಾಳದಲ್ಲಿ ಭಾರತ ಎಂದರೆ ವಿಶಾಲದೃಷ್ಟಿಯನ್ನೇ ಹೊಂದಿರುತ್ತಾರೆ.ಜಗತ್ತಿನ ದೊಡ್ಡಣ್ಣನೆನಿಸಿದ ಅಮೇರಿಕ ಮತ್ತು ಇತರ ಪ್ರಬಲ ರಾಷ್ಟ್ರಗಳ ನಾಗರೀಕರು ಭಾರತದ ಸಂಸ್ಕೃತಿಗೆ ಕಟ್ಟುಬೀಳುತ್ತಿದ್ದಾರೆ.ಮಾನವಪ್ರಾಣಿಯಾಗಿ ಜೀವಿಸಲು ನಮ್ಮಲ್ಲಿ ಅನೇಕ ಸವಲತ್ತುಗಳಿವೆ ಆದರೆ ಮನುಷ್ಯನಾಗಿ ರೂಪುಗೊಳ್ಳಲು ಭಾರತದ ವ್ಯವಸ್ಥಿತ ಸಂಸ್ಕೃತಿ ಅಗತ್ಯವಾಗಿದೆ ಎನ್ನುವ ನಿಲುವನ್ನು ತಾಳುತ್ತಿದ್ದಾರೆ.ಭಾರತ ದೇಶ ಭೂಮಿಯಲ್ಲಿ ಒಂದು ಶಿಷ್ಟಾಚಾರದ ನೆಲೆಯನ್ನು ಹೊಂದಿರುವುದು ನಮ್ಮೆಲ್ಲರ ಪುಣ್ಯ.ಭಾರತದ ಯಾವುದೇ ಮೂಲೆಗೋದರೂ ವೈವಿದ್ಯಮಯದ ಆಗರ ಮತ್ತು ಶಕ್ತಿ ಏಕಪ್ರಕಾರವಾಗಿದೆ‌.

ಉಡುಗೆ,ಆಹಾರ,ಭಾಷೆ,ವ್ಯವಹಾರ,ಸಂಬಂಧ,ಹೀಗೆ ಸಮಾಜದ ಎಲ್ಲಾ ವ್ಯವಸ್ಥೆಗಳಲ್ಲೂ ಆಚಾರಬದ್ಧ ಪ್ರಾಣಶಕ್ತಿಯನ್ನು ಹೊಂದಿದೆ‌.ಭಾರತ ಮಾತ್ರ ಶ್ರೇಷ್ಠ ಇನ್ನಿತರ ದೇಶಗಳು ಕನಿಷ್ಠ ಎಂದು ವಿಶ್ಲೇಷಣೆ ಅಥವಾ ಸ್ವ ಪ್ರಶಂಸೆಯಲ್ಲ.ನಮ್ಮಲ್ಲಿನ ವೈವಿಧ್ಯತೆಯ ಅನುರೂಪವಾಗಿ ಹೊರದೇಶಗಳು ಸಹ ರಚನೆಗೊಂಡಿವೆ.ಆದರೆ ಭಾರತ ಉಚ್ಛ್ರಾಯ ಸ್ಥಿತಿಯಲ್ಲಿರುವುದರಿಂದಲೇ ಈ ಔದಾರ್ಯದ ಮಾತುಗಾರಿಗೆ ನಮ್ಮ ಭಾರತದ ಶಿರವೇರಿದೆ.ನಮ್ಮೆಲ್ಲರ ಹೆಮ್ಮೆಗೆ ಗುರುತಾಗಿದೆ.ಇತಿಹಾಸದ ಉದ್ದಗಲಕ್ಕೂ ಗಮನಿಸಿದಾಗ ಭಾರತವನ್ನು ಬಯಸಿ ಇತರರು ಬಂದರೇ ವಿನಃ ನಾವೆಂದಿಗೂ ಹೋಗಿದ್ದಿಲ್ಲ.ಅಂದರೆ ನಮ್ಮ ಸ್ವಾಭಿಮಾನವನ್ನು ಹೆಚ್ಚಿಸುವಷ್ಟು ಬದುಕನ್ನು ಉತ್ತಮಗೊಳಿಸುವಷ್ಟು ಪ್ರಾಕೃತಿಕ ಶಕ್ತಿ ಇಲ್ಲಿದೆ.ಭೌತಿಕ ಮತ್ತು ಅಭೌತಿಕ ಅನ್ವೇಷಣೆಗಳೆರಡಕ್ಕೂ ಅಪಾರ ದಕ್ಕುವ  ಶಕ್ತಿಮಹಿಮೆಗಳು ಭಾರತದ ಭವ್ಯತೆ.ಈ ಭವ್ಯತೆಯ ಅರಿತವರು ಪ್ರಪಂಚದ ನಾನಾ ದೇಶಗಳಿಂದ ಅಂದಿನಿಂದ ಇಂದಿನವರೆಗೂ ಬರುತ್ತಲೇ ಇದ್ದಾರೆ.

ಇಲ್ಲಿನ ಅಪಾರ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಕೆಲವರು ಹೊತ್ತು ಹೋದರೆ ಇನ್ನೂ ಕೆಲವರು ತಮ್ಮ ಇಡೀ ಜೀವನವನ್ನು ಇಲ್ಲಿಯೇ ಕಳೆಯಬೇಕೆಂದು ನಿಶ್ಚಯಿಸಿ ನೆಲೆವೂರಿ ನಿಂತಿದ್ದಾರೆ.ತಮ್ಮ ಅನುವಂಶಿಕ ಮತ್ತು ಅಭ್ಯಾಸದ ಜೀವನಶೈಲಿಯನ್ನು ಕಳಚಿಟ್ಟು ಭಾರತ ಸಂಸ್ಕೃತಿಯ ದೀಕ್ಷೆ ಪಡೆಯುತ್ತಿದ್ದಾರೆ.ಮೇಲೆ ತಿಳಿಸಿದ ವಾಕ್ಯಾರ್ಥಗಳು ಕೇವಲ ಭಾರತದ ಶ್ರೇಷ್ಠತೆಯ ಚಿಕ್ಕ ಕಣವನ್ನು ಎತ್ತಿ ತೋರಿಸಿದೆಯಷ್ಟೇ.ಇನ್ನೂ ಬಿಡಿ ಬಿಡಿಯಾಗಿ ಹೇಳುತ್ತಾ ಹೋದರೆ ಒಂದು ಸಾಗರದ ನೀರನ್ನು ಲೆಕ್ಕಕ್ಕೆ ತಂದಷ್ಟು ಶ್ರಮ ತೆಗೆದುಕೊಂಡಂತಾಗುತ್ತದೆ.ಈಗ ಹೊರಗಿನವರನ್ನು ಬಿಡೋಣ ನಮ್ಮನ್ನು ನಾವು ಗಮನಿಸಿಕೊಳ್ಳೋಣ.ಆಗಲೇ ಹೇಳಿದಂತೆ ನಮ್ಮ ಬಳಿ ಇರುವ ಅಗಾಧತೆಗೆ ಗೌರವ ಮತ್ತು ಪ್ರಾಶಸ್ತ್ಯ ನೀಡದೆ ಬೇರೆಯವರ ಅಸ್ಪಷ್ಟ ಮಾದರಿಗಳಿಗೆ ಮುಗಿಬೀಳುವುದು ನಮ್ಮ ದಡ್ಡತನವಾಗಿದೆ!.ಅನುಕರಣೆ ಎನ್ನುವುದು ಒಳ್ಳೆಯದೇ ಆಗಿದೆ.ನಮ್ಮ ಪೂರ್ವಿಕರ ಸಂಸ್ಕೃತಿ ಅಲ್ಪಸ್ವಲ್ಪ ಇಂದಿಗೂ ಉಳಿದಿದೆ ಎಂದರೆ ಅದು ಅನುಕರಣೆಯಿಂದಲೇ.ಹಾಗೂ ನಮ್ಮ ಸಂಸ್ಕೃತಿ ಸತ್ವಸಹಿತವಾಗಿದ್ದರೂ ಸ್ಥಾನಕೊರತೆ ಹೊಂದುವುದಕ್ಕೆ ಈ ಅನುಕರಣೆಯಲ್ಲಿ ಆದ ಎಡವಟ್ಟು ಕೂಡ ಕಾರಣವಾಗಿದೆ.ನಾವುಗಳು ನಮ್ಮನ್ನು ನಾವು ಅನುಸರಿಸುವುದ್ದಕ್ಕಿಂತ ಬೇರೆಯವರನ್ನು ಅನುಸರಿಸುತ್ತಿರುವುದೇ ಹೆಚ್ಚು. ನಾವುಗಳು ಜಾತಿ,ಸ್ವಾತಂತ್ರ್ಯ,ಪೂರ್ವಪೀಡಿತ ಮೂಢನಂಬಿಕೆಯ ಆಚಾರಗಳಾದ ಬಾಲ್ಯವಿವಾಹ ,ಸತಿಸಹಗಮನಪದ್ಧತಿ,ಉಳ್ಳವರು ಮತ್ತು ಉನ್ನತದವರಿಗೆ ಮಾತ್ರ ಶಿಕ್ಷಣ, ಹಾಗೇಯೇ ವಿಧವ ವಿವಾಹ ಪದ್ಧತಿಯ ವಿರೋಧವನ್ನು ಹೊಂದಿದ್ದ ಸಂಧರ್ಭದಲ್ಲಿ ಪರಕೀಯರ ಸಂಸ್ಕೃತಿಯನ್ನು ಅನುಕರಣೆಗೆ ತಂದುಕೊಂಡು ಒಂದಷ್ಟು ಮಟ್ಟಿಗೆ ನಾವುಗಳು ಸಮಾಜದ ಕೆಲವು ವಿರುದ್ಧ ಪದ್ಧತಿಗಳಿಂದ ಮುಕ್ತರಾಗಲು ಮನಸ್ಸು ಮಾಡಿ ಸಮಾಜದ ಸ್ವಾಸ್ಥ್ಯಕ್ಕೆ ಅವಕಾಶ ಮಾಡಿಕೊಂಡಿದ್ದೇವೆ.ಸತಿಸಹಗಮನ ಪದ್ಧತಿಯನ್ನು ಭಾಗಶಃ ನಿರ್ಮೂಲನೆ ಮಾಡಿಕೊಂಡಿದ್ದೇವೆ ,ಬಾಲ್ಯ ವಿವಾಹ ಪದ್ಧತಿಯನ್ನು ಕಾನೂನು ಬಾಹಿರವೆಂದು ಘೋಷಿಸಲಾಗಿದೆ.

ಸಾರ್ವತ್ರಿಕ ಶಿಕ್ಷಣಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟಿಕೊಂಡಿದ್ದೇವೆ.ಅಸ್ಪೃಶ್ಯತೆ ಆಚರಣೆಯಲ್ಲಿರುವವರಿಗೆ ಕಠಿಣ ಶಿಕ್ಷೆಗೆ ಗುರಿಮಾಡಿ ಸಮಾಜವನ್ನು ಸಮಾನತೆಯಲ್ಲಿ ಕಾಣುವಂತೆ ಮುಂದಾಗಿದ್ದೇವೆ.ಹೀಗೆ ಹಲವು ಬದಲಾವಣೆಗಳನ್ನು ನಾವು ಇನ್ನೊಬ್ಬರಿಂದ ನೋಡಿ ಹೋರಾಡಿ ಕಾನೂನಾತ್ಮಕ ಬದುಕನ್ನು ಸುಂದರಗೊಳಿಸಿಕೊಂಡಿದ್ದೇವೆ.ಇದು ಒಳ್ಳೆಯ ಬೆಳವಣಿಗೆಯೇ ಆಯಿತು.ಅನುಕರಣೆಯ ಅನುಸಂಧಾನದಲ್ಲಿ ಇದು ಮಹಾನ್ ಅಗತ್ಯತೆಯೇ ಇತ್ತು.ಆದರೆ ಈ ಅನುಕರಣೆಯ ಜೊತೆಗೆ ಬೇರೆಯವರಿಂದ ನಮಗೆ ಬೇಡದಾಗಿರುವ ಸಂಸ್ಕೃತಿಯನ್ನೇ ಕಲಿಯಲು ಈ ಭೂತ ಮತ್ತು ತತ್ಸಮಾನ ಕಾಲಕ್ಕೆ ಹೋಗುತ್ತಿರುವುದು ಕೆಡುಕಿಗೆ ದಾರಿಯಾಗಿದೆ.ಅನುಕರಣೆಯಲ್ಲಿ ಅಂಧಾನುಕರಣೆ ಒಳ್ಳೆಯದಲ್ಲ.ಬಹಳರು ನಮ್ಮ ಭಾರತದ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಭಿನ್ನವೇ ತಿಳಿಯದ ಮಟ್ಟಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತ ನಮ್ಮದೇ ಆಚರಣೆಗಳೆಂದು ಬದುಕಿನ ನಿತ್ಯತರಂಗದಲ್ಲಿ ಅಭ್ಯಾಸ ಹವ್ಯಾಸಗಳೊಂದಿಗೆ ಭಾರತದ ಸಂಸ್ಕೃತಿಗೆ ಸಮಾಧಿ ಕಟ್ಟುತ್ತಿದ್ದಾರೆ.

ಎಲ್ಲವನ್ನೂ ಅನುಕರಣೆ ಮಾಡುವುದು ಒಳ್ಳೆಯದಲ್ಲ ನಮ್ಮನ್ನು ಸರಿಪಡಿಸಿಕೊಳ್ಳುವ ವಿಚಾರಗಳಲ್ಲಿ ನಾವು ಇನ್ನೊಬ್ಬರು ಸರಿ ಇರುವಾಗ ಅನುಸರಿಸಿ ಬದಲಾಗುವುದು ಒಳ್ಳೆಯದೇ, ಅದರಲ್ಲೇನೂ ತಪ್ಪಿಲ್ಲ‌.ನಮ್ಮ ಭಾರತೀಯರ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಪದ್ಧತಿಗಳು ಹೆಚ್ಚು.ಇವುಗಳ ಮಹತ್ವ ವಿಶಾಲವಾಗಿದೆ.ಆದರೆ ಇದರಲ್ಲಿ ಇರುವ ಭವ್ಯತೆ ಇಂದಿನ ಕೋತಿಮುಖದವರನ್ನು ಅನುಸರಿಸುತ್ತಿರುವವರಿಗೆ ತಿಳಿಯುತ್ತಿಲ್ಲ ಮತ್ತು ಬೇಕಾಗಿಲ್ಲ.ಕೋತಿಯವರನ್ನು ಅನುಕರಿಸಿ ಕೋತಿಯೇ ಆಗಿದ್ದಾರೆ.ವಿವಾಹದ ವ್ಯವಸ್ಥೆ , ಧಾರ್ಮಿಕ ಆಚರಣೆಗಳು, ಸಾಮಾಜಿಕ ಪದ್ಧತಿಗಳು, ಜೀವನಶೈಲಿಗಳು,ಉಡುಗೆ ತೊಡುಗೆ ಭಾಷೆ ಆಹಾರ ಎಲ್ಲವೂ ಬೇಡದ ಅನುಕರಣೆಯಲ್ಲಿ ಸಿಲುಕಿದೆ.ರಾಷ್ಟ್ರದ ಮುಖ್ಯ ಮಾನ್ಯರು ಅಧಿಕಾರ ವ್ಯಾಪ್ತಿಯ ವ್ಯಕ್ತಿವರ್ಯರು ಸಹ ಇದರ ಚಿಂತನೆಯಲ್ಲಿ ಎಡವಿ ನಮಗೆ ಸಲ್ಲದ ವ್ಯವಸ್ಥೆಗಳಿಗೆ ನಮ್ಮ ದೇಶದಲ್ಲಿ ಮಾರುಕಟ್ಟೆ ಸೃಷ್ಟಿಸಿ ಬೆಂಬಲಕೊಟ್ಟು ಮತ್ತದೇ ಅರಸರ ತಪ್ಪನ್ನು ಮಾಡುತ್ತಿದ್ದಾರೆ.ವಿಶ್ವದ ಜೊತೆಗೆ ಸ್ಪರ್ಧೆಗಿಳಿಯುವುದು ನಮ್ಮ ದೇಶದ ಶಕ್ತಿ ಮತ್ತು ಯುಕ್ತಿ ಪ್ರದರ್ಶನ ಅಹುದು.ಆದರೆ ಸ್ಪರ್ಧಿಸುವಾಗ ಎಚ್ಚರ ಅಗತ್ಯ. ನಾವು ಯಾರ ಜೊತೆ ಸ್ಪರ್ಧಿಸುತ್ತಿದ್ದೇವೆ.ಏತಕ್ಕಾಗಿ ಸ್ಪರ್ಧಿಸುತ್ತಿದ್ದೇವೆ.ನಮಗೆ ಈ ಸ್ಪರ್ಧೆ ಅಗತ್ಯವಿದೆಯಾ.ಈ ಸ್ಪರ್ಧೆಯಲ್ಲಿ ಗೆದ್ದು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾ !ಎನ್ನುವ ದೃಷ್ಟಿಕೋನಗಳ ಇತ್ಯಾದಿಯಾಗಿ ಇದೆಲ್ಲವೂ ಇರುತ್ತದೆ.

ಆದರೆ ನಾವು ವಿಶ್ವದ ಜೊತೆಗೆ ಸ್ಪರ್ಧೆಯಲ್ಲಿ ಗೆದ್ದು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿದ್ದೇವೆ.ನಮ್ಮವರಿಗೆ ಒಂದು ಎಚ್ಚರಿಕೆಯೆ ಸಂದೇಶ ಇದು *”ನಮ್ಮ ಭಾರತದ ಸಂಸ್ಕೃತಿ ಬಡತನವಲ್ಲ ನಾವು ಇನ್ನೊಬ್ಬರನ್ನು ಬೇಡಲು ಮತ್ತು ನೋಡಿ ಅನುಕರಿಸಲು; ನಮ್ಮದು ವಿಶ್ವದ ಶ್ರೀಮಂತ ಸಂಸ್ಕೃತಿ; ದಯವಿಟ್ಟು ಅಂಧಾನುಕರಣೆಯಿಂದ ಹೊರಬನ್ನಿ”*ಚಿನ್ನವನ್ನು ತೊರೆದು ಕಬ್ಬಿಣದ ವರ್ಣಮಯ ರೂಪಕ್ಕೆ ಮಾರುಹೋಗಬೇಡಿ.ಯಂತ್ರಗಳು ತಂತ್ರಗಳು ಈ ಕಾಲದ ವೈಜ್ಞಾನಿಕ ಬೆಳವಣಿಗೆಯಾಗಿರಬಹುದು ಪ್ರತಿ ಕ್ಷಣದ ಅಗತ್ಯವಾಗಿರಬಹುದು.ಇದು ನಮಗೆಲ್ಲರಿಗೂ ತಾಂತ್ರಿಕ ಮತ್ತು ಕೃತಕ ಬದುಕನ್ನು ಕಟ್ಟಿಕೊಡುವಲ್ಲಿ ಮಾತ್ರ ಸಾಧ್ಯ.ನೈಜತೆಗೆ ನಮ್ಮ ಪಾರಂಪರಿಕ ಸಂಸ್ಕೃತಿಯೇ ಮುಖ್ಯ ಎನ್ನುವುದೇ ಸತ್ಯ.ಭಾಷೆಯ ವಿಚಾರದಲ್ಲಿ ದೈವ ಭಾಷೆಯ ಮತ್ತು ದೈವಾಂಶದ ಸಮಾನ ಅಂಶಗಳನ್ನು ಒಳಗೊಂಡ ಭಾಷೆ ನಮ್ಮದು.ಭಾಷೆಯ ನುಡಿಯಲ್ಲಿ ಯೋಗ ಪ್ರಾಣಯಾಮದ ಮಿಳಿತವಿದೆ.ಜೀವ ಚೈತನ್ಯದ ಮೋಕ್ಷ ಪ್ರದಾಯದ ಗುಣಕಾರಕಗಳಿವೆ.ನಮ್ಮ ದೈಹಿಕ ಮಾನಸಿಕ ಚಕ್ರ ಅಥವಾ ಶಕ್ತಿ ಕೇಂದ್ರಗಳನ್ನು ಪ್ರಭಾವಿಸುವಷ್ಟು ಸ್ವರ ಏರಿಳಿತದ ಅರ್ಥಲಯ ಶಕ್ತಿಗಳನ್ನು ಒಳಗೊಂಡಿದೆ.ಹೀಗಿರುವಾಗ ವ್ಯವಹಾರಿಕವಾಗಿ ಕಂಡ ಭಾಷೆಯ ದಾಸರಾಗುವುದು ಒಳ್ಳೆಯ ಬೆಳವಣಿಗೆಯಲ್ಲ.ಹಾಗೂ ಆ ಅನ್ಯ ವ್ಯವಹಾರಿಕ ಭಾಷೆಯ ಕಲಿತವರಿಗೆ ಅಗ್ರಸ್ಥಾನದ ಕೋಡುಗಳನ್ನಿಟ್ಟು ಗೌರವಿಸಿ ಇತರರನ್ನು ಆ ದಾರಿ ಎಡೆಗೆ ಸೆಳೆಯುವುದು ಸರಿಯಲ್ಲ.

ವ್ಯವಹಾರಿಕ ವ್ಯವಹಾರಿಕವೇ ಮಾತ್ರ ಆಗಿರಲಿ.ಇದೇ ರೀತಿ ನಮ್ಮ ಇತ್ತೀಚಿಗಿನಾ ನಡಾವಳಿಯು ಮನರಂಜನೆಯ ಹಾದಿಯಲ್ಲಿ ಬಹಳಷ್ಟು ಎಡರುತ್ತಿದೆ.ನಮ್ಮ ಭಾರತ ಸಂಸ್ಕೃತಿಯಲ್ಲಿನ ಮನರಂಜನೆಗಳಲ್ಲಿ ನೆಮ್ಮದಿ ಇದೆ.ಪೂರ್ಣ ಬದುಕಿದೆ.ಸಂಸ್ಕೃತಿಯ ಜ್ಞಾನವಿದೆ.ನಡೆ ನುಡಿಯ ಶುದ್ಧಿ ಇದೆ.ದೈವಿಕ ಪರಂಪರೆಯ ಛಾಯೆ ಇದೆ.ಪ್ರತಿಯೊಂದಕ್ಕೂ ಮೌಲಿಕ ಅರ್ಥ ಇದೆ.ನಾವು ಇಂದು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಾಲ್ಯದಲ್ಲಿ ನಾವು ಕಂಡ ಆ ಗ್ರಾಮೀಣ ಆಟೋಟ ಮತ್ತು ಇತರ ಜೀವನ ಶೈಲಿಗಳನ್ನೇ ಪುನರ್ ಸ್ಥಾಪಿಸಲು ಬಯಸುವುದು ಮತ್ತು ಆ ಘಟನೆಗಳನ್ನು ನೆನೆದು ಸಂತೋಷ ಪಡುವುದನ್ನು ವೈಭವೀಕರಿಸುವುದರಲ್ಲಿ ನಮ್ಮ ಸಂಸ್ಕೃತಿಯ ಒಳಿತು ಈಗ ಅರಿವಾಗುತ್ತಿದೆ ಎಂದು ಭಾವಿಸುತ್ತೇನೆ. ಹಾಗೆಯೇ ಈ ಅರಿವು ಬಂದಾಗಿದೆ ಎಂದರೆ ಮತ್ತೆ ಇನ್ನೂ ನಾವು ನೀವು ಬೇಡದ ಸಂಸ್ಕೃತಿಗೆ ವೇದಿಕೆ ಕೊಡುತ್ತಿರುವುದು ಸರಿಯಲ್ಲ.ರವೀಂದ್ರನಾಥ ಟ್ಯಾಗೋರ್ ಅವರು ಹಿಂದೊಮ್ಮೆ ಹೀಗೆ ಕರೆಕೊಟ್ಟಿದ್ದರು “ನಿಸರ್ಗಕ್ಕೆ ಹಿಂದಿರುಗಿ ಅಥವಾ ಮರಳಿ ಬನ್ನಿ ಎಂದು”.ಈಗ “ನಾನೊಮ್ಮೆ ಹೀಗೆ ಕರೆಕೊಡುತ್ತಿರುವೆ ಬಂಧುಗಳೇ ನಮ್ಮ ಭಾರತ ಸಂಸ್ಕೃತಿಗೆ ಮರಳಿ ಬನ್ನಿ” ಅನುಕರಣೆ ಒಳ್ಳೆಯದೇ ಆದರೆ ಅಂಧಾನುಕರಣೆ ಒಳ್ಳೆಯದಲ್ಲ.