ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)
ವರ್ತಮಾನದಲ್ಲಿ ಭಾರತದ ಬೆಳವಣಿಗೆ ಸಾಮಾನ್ಯ ಜನತೆಯ ಸಾಮಾಜಿಕ ಬದುಕಿನ ದಿಕ್ಸೂಚಿ ತಪ್ಪಿಸಿದೆ. ಸೌಹಾರ್ದಯುತ ರಾಷ್ಟ್ರದ ಜನತೆಗೆ ತಿಳಿಗೇಡಿಗಳು ಧಾರ್ಮಿಕ ಮತಾಂಧತೆ ಮತ್ತು ಪ್ರತ್ಯೇಕತೆಯ ವಿಷಬೀಜ ಉಣಿಸುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಧರ್ಮವನ್ನು ಮಾರಕ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಹಿಂದುತ್ವ ರಾಷ್ಟ್ರದ ನಿರ್ಮಾಣವಾಗಬೇಕು, ಹಿಂದುಗಳು ಒಗ್ಗೂಡಬೇಕು ಎನ್ನುವುದೊಂದು ಕುತಂತ್ರ ನೀತಿ. ಇದನ್ನು ಅರಿಯದ ಭಾರತೀಯ ನಾಗರಿಕರು ಯಾರದ್ದೋ ಕೆಲ ನಿರಂಕುಶವಾದಿಗಳ ಲಾಭಕ್ಕೆ ತಮ್ಮಲ್ಲಿನ ಮನುಷ್ಯತ್ವ ಮೌಲಿಕತೆಗಳನ್ನು ಸುಡುತ್ತಿದ್ದಾರೆ.
ಕೆಲ ಮುಸ್ಲಿಂ ಧರ್ಮೀಯರು ಇದಕ್ಕೆ ಪೂರಕವಾಗಿ ಮತಾಂಧರಾಗಿ ಅಪ್ರಜ್ಞಾ ಸ್ಥಿತಿಯಲ್ಲಿ ವರ್ತಿಸುತ್ತಿರುವುದು; ಆನೆ ತನ್ನ ಮೇಲೆ ತಾನೇ ಮಣ್ಣೆರೆಚಿಕೊಳ್ಳುವ ಗಾದೆಯ ಮಾತಿಗೆ ಹತ್ತಿರವಾಗಿದ್ದಾರೆ.ಹಿಜಾಬ್ ವಿಚಾರ ಕೆಲ ಮುಸ್ಲಿಂ ಭಾಂಧವರಿಗೆಯೇ ಸರಿಯಾಗಿ ಅರ್ಥವಾಗಿಲ್ಲವೆಂದು ಕಾಣಿಸುತ್ತದೆ. ಶಾಲೆಯಲ್ಲಿ ಸಮವಸ್ತ್ರವಿರುವುದು ಸಾಮರಸ್ಯ ಮೆರೆಯಲು; ಇದು ಮುಸ್ಲಿಂ ಧರ್ಮಕ್ಕೆ ಬೀಳುವ ಕೊಡಲಿ ಪೆಟ್ಟಲ್ಲ. ಬದಲಿಗೆ ನಾವೆಲ್ಲರೂ ಒಂದೇ ಎನ್ನುವ ತತ್ವಕ್ಕೆ ಸಿಲುಕುವುದಾಗಿದೆ. ಭಾತರದ ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಇದು ಅವರವರ ಸೀಮೀತ ಎಲ್ಲೆಗಳಲ್ಲಿ ಮಾತ್ರವೇ ಹೊರತು ಸಾರ್ವಜನಿಕವಾಗಿ ಎಂಬುದಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ.
ಕೆಲವರು ಹಿಜಾಬ್ ವಿಚಾರದ ತಗಾದೆಯಲ್ಲಿ ಏನೇ ಕುತಂತ್ರತನ ತೋರಿರಬಹುದು ಆದರೆ ಶಾಲೆಯಲ್ಲಿ ಸಮವಸ್ತ್ರವೊಂದೇ ಕಡ್ಡಾಯ ಎನ್ನುವ ನೀತಿ ಮುಸ್ಲಿಂ ಸಮುದಾಯವನ್ನು ಎಂದಿಗೂ ಕಳಪೆಮಾಡುವುದಿಲ್ಲ.
ಈ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪು ನ್ಯಾಯಬದ್ಧವಾಗಿದೆ. ಭಾರತೀಯರ ಭ್ರಾತೃತ್ವ ಬದುಕಿನ ದೃಷ್ಟಿಕೋನವಿದೆ. ಇದನ್ನು ಅರ್ಥಮಾಡಿಕೊಳ್ಳದೇ ಹಿಂದುಗಳ ವಿರುದ್ಧ ಕಿಡಿಕಾರುವುದು, ಮತ್ಸರದಿಂದಿರುವುದು ಒಳ್ಳೆಯ ಚಿಂತನೆಗಳಲ್ಲ. ಜೊತೆಗೆ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು ಒಂದು ರೀತಿಯಲ್ಲಿ ತಮಗೆ ತಾವೇ ಮಾಡಿಕೊಳ್ಳುತ್ತಿರುವ ಮೋಸ. ತಮ್ಮ ಮಕ್ಕಳ ಶಿಕ್ಷಣದ ಉಜ್ವಲ ಭವಿಷ್ಯವನ್ನು ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಮೊಟಕುಗೊಳಿಸಿ ಸೆಡ್ಡುಹೊಡೆದು ನಿಲ್ಲುವುದು ದಡ್ಡತನ. ಈ ಕೆಲ ದಶಮಾನಗಳಲ್ಲಿ ಶಿಕ್ಷಣ ಪಡೆದು ಒಳ್ಳೆಯ ಸ್ಥಾನಕ್ಕೆ ಬರುತ್ತಿದ್ದವರು ಧಾರ್ಮಿಕ ಸಂಪ್ರದಾಯಗಳ ಕಟ್ಟುಪಾಡಿಗೆ ಬಿದ್ದು ಮತ್ತದೇ ಅಜ್ಞಾನದ ಕೂಪಕ್ಕೆ ಬಿದ್ದರೆ ಯಾರಿಗೆ ನಷ್ಟ. ಆದಷ್ಟು ಬೇಗ ಜಾಗೃತರಾದರೆ ಅಲ್ಪಸಂಖ್ಯಾತರಿಗೆ ಒಳಿತಿದೆ.
ಇದನ್ನು ಮುಂದುವರೆದು ಹಿಂದುಗಳು ಮಾರುವ ಮೀನನ್ನು ಕೊಳ್ಳಬಾರದು ಎಂದು ಕಡಲ ತೀರದ ಪ್ರದೇಶಗಳಲ್ಲಿ ಮುಸ್ಲಿಂ ಭಾಂಧವರು ಇತ್ತೀಚಿಗೆ ಹೇಳಿಕೆ ನೀಡಿರುವುದು ಶತಮೂರ್ಖತನ. ಈ ದೇಶ ಅಂತಲ್ಲ; ಎಲ್ಲಿಯೂ ಎಂದಿಗೂ ಬಹುಸಂಖ್ಯಾತರ ನಾಡಿನಲ್ಲಿ ಅಲ್ಪಸಂಖ್ಯಾತರು ಕೈಗೊಳ್ಳುವ ಬಹುಸಂಖ್ಯಾತರ ವಿರುದ್ಧ ತೀರ್ಮಾನ ಬಹುಸಂಖ್ಯಾತರನ್ನು ಅಲುಗಾಡಿಸುವುದಿಲ್ಲ. ಇದು ಸ್ವತಃ ಅಲ್ಪಸಂಖ್ಯಾತರಿಗೆಯೇ ತೊಂದರೆ ಎನ್ನುವುದೇ ನಿಶ್ಚಿತ. ಮುಸ್ಲಿಂ ಧರ್ಮೀಯರ ಹೇಳಿಕೆಗೆ ವಿರುದ್ಧವಾಗಿ ಹಿಂದು ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂ ಧರ್ಮೀಯರ ವ್ಯಾಪಾರ ವಹಿವಾಟಿಗೆ ಹಿಂದುಗಳು ನಿರ್ಬಂಧ ಏರಲು ತಿಳಿಸಿರುವುದು ಸರ್ವಧರ್ಮೀಯ ಸಹಬಾಳ್ವೆಗೆ ಹೆಸರಾದ ಭಾರತದಂತಹ ರಾಷ್ಟ್ರಕ್ಕೆ ಸರಿಯಲ್ಲ. ವ್ಯಾಪಾರ – ವಹಿವಾಟು ಮಾನವ ಸಂಬಂಧದ ಕೊಂಡಿ. ಈ ರೀತಿ ಧಾರ್ಮಿಕ ದೃಷ್ಟಿಯಿಂದ ಆ ಕೊಂಡಿಯನ್ನು ಕಳಚಬಾರದು. ಕಳಚಿದ ದಿನದಿಂದಲೇ ಅಲ್ಪಸಂಖ್ಯಾತರ ಬದುಕು ದುಸ್ಥರವಾಗುತ್ತದೆ. ಸಂವಿಧಾನ ವಿರುದ್ಧ ಚಟುವಟಿಕೆಗಳು ಮತ್ತಷ್ಟು ಉಲ್ಭಣಗೊಳ್ಳುತ್ತವೆ. ಭಾರತ ಕೋಮುವಾದದ ಸ್ಥಳವಾಗಿ ಭ್ರಾತೃತ್ವ ಕಣ್ಮರೆಯಾಗುತ್ತದೆ.
ಭಾರತ ಕೇವಲ ಜಾತಿ, ಜನಾಂಗ, ಧರ್ಮದ ಆಧಾರಿತವಾಗಿ ರೂಪುಗೊಂಡಿಲ್ಲ; ಕಸುಬಿನ ಆಧಾರಿತವಾಗಿಯೂ ರೂಪುಗೊಂಡಿದೆ. ಮುಸ್ಲಿಂ ಧರ್ಮೀಯರು ಮಾಂಸದ ಅಂಗಡಿಗಳನ್ನಿಟ್ಟು ಮಾಂಸಹಾರಿಗಳಿಗೆ ಆಹಾರ ಒದಗಿಸುತ್ತ, ತಂತ್ರಜ್ಞಾನ ಮತ್ತು ಯಂತ್ರಗಳ ಒರಟು ಕೆಲಸವನ್ನು ಮಾಡುತ್ತ, ಸಾಮಾನ್ಯವಾಗಿ ಜೀವನದ ಅವಶ್ಯಕ ಸರಕುಗಳನ್ನು ಮಾರಾಟ ಮಾಡಿ ಬದುಕುವಲ್ಲಿ ಹೆಚ್ಚಿನ ಪಾತ್ರವಹಿಸಿದ್ದಾರೆ. ಅದೇ ರೀತಿ ಮಾನವನ ಔನತ್ಯಕ್ಕೆ ಬೇಕಾದ ಭೌದ್ಧಿಕ ಸೂಕ್ಷ್ಮ ಸಂವೇದನೆಯ ಕೆಲಸಗಳಲ್ಲಿ ಮಿಕ್ಕವರ ಪಾಲು ಹೆಚ್ಚುಗಾರಿಕೆಯಾಗಿದೆ. ಇಲ್ಲಿ ಮಾನವ ಬದುಕಿನ ಕೆಲಸಗಳನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ಎಲ್ಲವೂ ಅಗತ್ಯವೇ, ಎಲ್ಲವೂ ಸಮಾನ ಪ್ರಾಧ್ಯಾನ್ಯತೆಯ ಕೆಲಸವೇ. ಈ ರೀತಿ ಹಂಚಿಕೆಯಾಗಿರುವ ಕೆಲಸಗಳನ್ನು ನಾವೊಬ್ಬರೇ ಮಾಡಿಕೊಳ್ಳುತ್ತೇವೆ ಎನ್ನುವುದು ಸಾಧ್ಯವಿಲ್ಲದ ಮಾತು. ವೈಧ್ಯರೆಲ್ಲರೂ ಮುಸ್ಲಿಂ ಧರ್ಮೀಯರಲ್ಲ; ನಾವು ಹಿಂದುಗಳಿಂದ ಚಿಕಿತ್ಸೆ ಪಡೆಯುವುದಿಲ್ಲ ಎಂದು ಹೇಳುವುದಕ್ಕೆ ಪ್ರಸ್ತುತ ಅನಾರೋಗ್ಯ ಸ್ಥಿತಿಯ ಬಿಕ್ಕಟ್ಟಿನಲ್ಲಿ ಇದು ಸಾಧ್ಯವಿರುವ ಮಾತೇ. ಅದೇ ರೀತಿ ಹಿಂದು ಮಾಂಸಹಾರಿಗಳು ಸ್ವತಃ ತಾವುಗಳೇ ಪ್ರಾಣಿಗಳನ್ನು ಕೊಂದು ತಿನ್ನುವ ಮನಸ್ಥಿತಿಗೆ ಬದುಕಿನ ಇನ್ನಿತರ ಕಾರ್ಯಚಟುವಟಿಕೆಗಳ ನಡುವೆ ಸಂಪೂರ್ಣವಾಗಿ ತೊಡಗಿಕೊಳ್ಳಲು ಎಲ್ಲಾ ಹಿಂದುಗಳಿಗೂ ಸಾಧ್ಯವಿದೆಯೇ? ನಿಸರ್ಗ ಸರಪಳಿಯ ರೀತಿ ಮಾನವ ಸರಪಳಿಯಲ್ಲಿ ಮಾನವರೆಲ್ಲರೂ ಒಬ್ಬರನೊಬ್ಬರು ಅವಲಂಬಿಸಿ ನಿಂತಿದ್ದೇವೆ
. ಸ್ವಾವಲಂಬಿಗಳಾಗಿ ಬದುಕುವುದು ನಮ್ಮ ಭಾರತ ಭೂಮಿಗೆ ಈ ವಿಚಾರದಲ್ಲಿ ಮಾತ್ರ ಒಗ್ಗದ ಮಾತು. ಒಬ್ಬರಿಗೊಬ್ಬರು ಸಹಕಾರವಾಗಿ ಬದುಕುವುದೇ ಒಪ್ಪುವ ಮಾತು ಮತ್ತು ಭರತ ನಾಡಿನ ಐಕ್ಯತೆಯ ಸಂದೇಶ.
ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಒಂದು ಇತಿಹಾಸವನ್ನು ಅರಿಯಲು ಕಾಣಬೇಕು. ಸತ್ಯ ಘಟನೆ ಎಂದಾದ ಕಾಶ್ಮೀರ ಪ್ರದೇಶದಲ್ಲಿ ತೊಂದರೆಗೊಳಗಾದವರಿಗೆ ನ್ಯಾಯ ಸಿಗಲು ಮತ್ತು ತಪ್ಪು ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿ ಆ ತಪ್ಪನ್ನು ಮತ್ತೆಂದೂ ಮಾಡದಿರುವ ಮನಸ್ಥಿತಿಗೆ ಬರುವಂತರಾಗಬೇಕು. ಇದಷ್ಟೇ ಸಿನಿಮಾ ಪ್ರಸರಣೆಯ ಧ್ಯೇಯವಾಗಬೇಕು. ಅಲ್ಲಿರುವ ವಿಧ್ವಂಸಕ ಚಿತ್ರಣವನ್ನು ಮುನ್ನಲೆಗೆ ತಂದು ಕೋಮುವಾದದ ದಳ್ಳುರಿಗೆ ತುಪ್ಪ ಸುರಿಯುವ ಕೆಲಸವಾಗಬಾರದು. ಆದರೆ ಹೆಚ್ಚಾಗಿ ದ್ವೇಷದ ಹಾದಿಗೆ, ಸೇಡಿನ ಮುಯ್ಯಿಗೆ ಇದು ಎಲ್ಲಾ ರೀತಿಯಲ್ಲಿ ಸ್ಥಾನಪಡೆಯುತ್ತಿದೆ; ಇದಾಗಬಾರದು. ಈ ರೀತಿ ಒಂದು ವರ್ಗ ಇನ್ನೊಂದು ವರ್ಗದ ಮೇಲೆ ದಬ್ಬಾಳಿಕೆ ನಡೆಸಿ ಅಟ್ಟಹಾಸ ಮೆರೆದಿರುವುದು ಇತಿಹಾಸದಲ್ಲಿ ಸಾಕಷ್ಟಿದೆ.
ಹಿಂದೂಗಳು ಸಹ ಸ್ವಧರ್ಮಿಯರನ್ನೇ ಜಾತಿ ವಿಚಾರವಾಗಿ ಹಿಂಸಿಸಿದ್ದೂ ಇದೆ. ಈಗಲೂ ಅಲ್ಲಲ್ಲಿ ಬಹಳವಿದೆ. ಇವೆಲ್ಲವೂ ಕಾಲಗರ್ಭದಲ್ಲಿ ಮಾನವರ ಸ್ವಾರ್ಥಗಳಿಂದಾದ ಹೊಲಸು ಕೃತ್ಯ. ಆ ಹೊಲಸು ಕೃತ್ಯಗಳನ್ನು ಪದೇ ಪದೇ ನೆನೆದು ಮತ್ತದೇ ಹೊಲಸು ಅಥವಾ ಹ್ಯೇಯ ಕೃತ್ಯಗಳಲ್ಲಿ ತೊಡಗುವಂತೆ ಸಮಾಜವನ್ನು ಪ್ರೇರೇಪಿಸುವುದು ಕಾನೂನು ಬಾಹಿರ ಅಪರಾಧ.ಹಲವಾರು ಬಗೆಯಲ್ಲಿ ಭಾರತ ಕೋಮುಗಲಬೆಯ ಚಕ್ರವ್ಯೂಹಕ್ಕೆ ಸಿಲುಕಿದೆ. ಬಿಡಿಸಲೋದಷ್ಟು ಇದು ಹೆಚ್ಚೆಚ್ಚೇ ವಿರೂಪ ಪಡೆಯುತ್ತಿದೆ. ಪ್ರಜ್ಞಾವಂತ ಪ್ರಜಾಪ್ರಭುತ್ವ ಭಾರತೀಯರಾದ ನಾವುಗಳು ಸಂವಿಧಾನಕ್ಕೆ ಬದ್ಧರಾಗಿ ನಮ್ಮಲ್ಲಿರುವ ಈ ರೀತಿಯ ಸಮಾಜಘಾತುಕ ತೊಡುಕುಗಳನ್ನು ನಿರ್ಣಾಮಮಾಡಿಕೊಳ್ಳದೇ ನೆಮ್ಮದಿಯುತ ಬದುಕು ಸಾಧ್ಯವಿಲ್ಲ. ಹೊರಗಿನವರು ಇದರ ಲಾಭ ಪಡೆಯುವ ಮುನ್ನ ಭಾರತೀಯರು ಎಚ್ಚೆತ್ತುಕೊಳ್ಳಬೇಕಿದೆ. ಭಾರತವು ಇತರ ರಾಷ್ಟ್ರಗಳ ನಡುವೆ ಸಮನ್ವಯಬಲ ಸಾಧಿಸುವ ನಿಟ್ಟಿನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸವುದು ಮತ್ತು ಯೋಗಕ್ಷೇಮಾಭಿವೃದ್ಧಿಯತ್ತ ಗಮನ ನೀಡುವುದಷ್ಟೇ ಭಾರತೀಯರೆಲ್ಲರ ದೃಷ್ಟಿ ಯಾಗಿರಬೇಕು. ಭಾರತ ಎಂದಿಗೂ ಕೋಮು ಸಸಿಗಳ ತೋಟವಾಗಬಾರದು.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ವಿಮರ್ಶಕ, ಸಂಶೋಧಕ
ಹೆಚ್.ಡಿ.ಕೋಟೆ ಮೈಸೂರು.
ದೂರವಾಣಿ ಸಂಖ್ಯೆ:-8884684726