ಇದೀಗ ಪಟ್ಟಣದಿಂದ ಸೋಂಕಿತರು ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಕಳೆದ ಬಾರಿ ಹಳ್ಳಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಜತೆಗೆ ಸೋಂಕು ಕಂಡು ಬಂದರೆ ಸೀಲ್ಡ್ ಡೌನ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅದ್ಯಾವುದು ಮಾಡದ ಕಾರಣದಿಂದಾಗಿ ಹಳ್ಳಿಗಳು ಸೋಂಕಿತರ ಬೀಡಾಗುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ.

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಕೋವಿಡ್ ಸೋಂಕು ಹರಡುತ್ತಿರುವುದನ್ನು ಸ್ವತಃ ಸಚಿವ ಸುರೇಶ್ ಕುಮಾರ್ ಅವರೇ ಒಪ್ಪಿಕೊಂಡಿದ್ದು ಐದಕ್ಕಿಂತ ಹೆಚ್ಚು ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಕಂಟೋನ್ಮೆಂಟ್ ಝೋನ್ ಮಾಡಲಾಗುವುದಾಗಿ ಹೇಳಿದ್ದಾರೆ. ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಅವರು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಬೆಂಗಳೂರಿನಿಂದ ಹಿಂತಿರುಗಿರುವವರನ್ನು ಪತ್ತೆ ಹಚ್ಚಿ ಕೋವಿಡ್ ಟೆಸ್ಟ್ ಮಾಡಿಸಲಾಗುವುದಲ್ಲದೆ, ಸೋಂಕು ಪತ್ತೆಯಾದರೆ ಆಸ್ಪತ್ರೆಗೆ ಇಲ್ಲವೇ ಹೋಂ ಐಸೋಲೇಷನ್ ಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಸೋಂಕು ಇಲ್ಲದಿರುವ ಕೊರೋನಾ ಲೈಟ್ ಸಿಂಡ್ರೋಮ್ ವ್ಯಕ್ತಿಗಳನ್ನು ಕೂಡ ಕೊರೋನಾ ಸೋಂಕಿತರು ಎಂದು ಪರಿಗಣಿಸಿ ಚಿಕಿತ್ಸೆ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊರೋನಾ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರಲು ಜಿಲ್ಲಾಧಿಕಾರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಲಾಗಿದೆ. ಕೊರೋನಾ ವಾರಿಯರ್ಸ್‌ಗಾಗಿಯೇ ೫೦ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.

By admin