ಚಾಮರಾಜನಗರ:ಪೊಲೀಸ್ ಆಧಿಕಾರಿಗಳು ಹಾಗೂ ಅಭಿಯೋಜಕರು ಕಾನೂನಿನ ಸಂಪೂರ್ಣ ಅರಿವು ಪಡೆದು ದಿನನಿತ್ಯದ ಕೆಲಸ ಕಾರ್ಯನಿರ್ವಹಣೆಯಲ್ಲಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಅಭಿಯೋಜಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ೧೨೫ ಪೋಕ್ಸೋ ಹಾಗೂ ೧೭೫ ಎಸ್.ಸಿ, ಎಸ್.ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ವಿಚಾರಣಾ ಕಾರ್ಯದಲ್ಲಿ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ಸರ್ಕಾರಿ ಅಭಿಯೋಜಕರು ನಿಷ್ಪಕ್ಷಪಾತವಾಗಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಸಹಾಯಕವಾಗಲಿದೆ. ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಕಾರ್ಯಾಗಾರದ ಅರಿವು ಪಡೆದು ಇನ್ನೂ ಹೆಚ್ಚಿನ ಕಾರ್ಯದಕ್ಷತೆಯನ್ನು ಉತ್ತಮಪಡಿಕೊಳ್ಳುವಂತೆ ಜಿಲ್ಲಾ ನ್ಯಾಯಾಧೀಶರಾದ ಭಾರತಿ ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಕ್ರಿಮಿನಲ್ ಜಸ್ಟೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಪರಾಧಿಗೆ ಸೂಕ್ತ ಶಿಕ್ಷೆ ಕೊಡಿಸುವ ಭರದಲ್ಲಿ ಸ್ಥಳ ಪರಿಶೀಲನಾ ವರದಿಯಲ್ಲಿ ಕೆಲವೊಮ್ಮೆ ತಪ್ಪುಗಳಾದರೇ ನಿರಪರಾಧಿಗೆ ಶಿಕ್ಷೆಯಾಗುವ ಸಂಭವವಿದೆ. ಇದಕ್ಕಾಗಿ ಪೊಲೀಸ್ ಹಾಗೂ ಅಪರಾಧ ಪತ್ತೆ ಹಚ್ಚುವ ಸಿಬ್ಬಂದಿ ವೈಜ್ಞಾನಿಕ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಪೊಲೀಸರಿಗೆ ನ್ಯಾಯಾಂಗ ಇಲಾಖೆಯ ಮಾರ್ಗದರ್ಶನ ಅವಶ್ಯವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಹೊಸ ಹೊಸ ಕಾನೂನುಗಳು ಜಾರಿಯಾದರೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಕಷ್ಟು ಪ್ರಕರಣಗಳಲ್ಲಿ ನಿರಪರಾಧಿಗೆ ಶಿಕ್ಷೆಯಾಗುತ್ತಿದೆ. ಇದು ತಪ್ಪಬೇಕು. ಯಾವುದೇ ಪ್ರಕರಣದಲ್ಲಿ ಸ್ಥಳ ಪರಿಶೀಲನಾ ವರದಿ ತಯಾರಿಸುವಾಗ ಎರಡು ಕಡೆಯವರ ಸಮ್ಮುಖದಲ್ಲಿ ಮಹಜರು ಮಾಡಬೇಕು. ಸಮಾಜದಲ್ಲಿ ಪ್ರಬಲರ ಒತ್ತಾಸೆಗೆ ಮಣಿಯದೇ ನಿಷ್ಪಕ್ಷಪಾತ ಹಾಗೂ ನೈಜ ತನಿಖೆ ನಡೆಸಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ಅವರು ಮಾತನಾಡಿ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಯಲ್ಲಿ ಕಾನೂನಾತ್ಮಕ ವಾದ ಮಂಡಿಸಿ ನಿರಪರಾಧಿಗಳಿಗೆ ನ್ಯಾಯ ಕೊಡಿಸುವಲ್ಲಿ ಇನ್ನಷ್ಟು ಪರಿಣತಿ ಹೊಂದಲು ಅಭಿಯೋಜಕರಿಗೆ ಅರಿವು ಕಾರ್ಯಾಗಾರಗಳನ್ನು ಆಯೋಜಿಸುವಂತೆ ಕರ್ನಾಟಕ ಉಚ್ಛ ನ್ಯಾಯಾಲಯ ಸುತ್ತೋಲೆ ಹೊರಡಿಸಿರುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಸಹ ಕಾನೂನು ಅರಿವು ಅಷ್ಟೇ ಮಹತ್ವದ್ದಾಗಿದೆ. ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಗಳು ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾನೂನು ಎನ್ನುವುದು ಮಹಾ ಸಾಗರವಿದ್ದಂತೆ. ಇದುವರೆಗೆ ೧೫ ಸಾವಿರಕ್ಕೂ ಹೆಚ್ಚು ಕಾನೂನುಗಳು ಜಾರಿಯಾಗಿದ್ದು, ಎಲ್ಲರಿಗೂ ಎಲ್ಲಾ ಕಾನೂನುಗಳನ್ನು ಅರಿಯುವುದು ಅಸಾಧ್ಯ. ಕಲಿಕೆ ನಿರಂತರ ಪ್ರಕ್ರಿಯೆಯಾಗಿರುವುದರಿಂದ ವೃತ್ತಿ ನಿರ್ವಹಣೆಗೆ ಎಷ್ಟು ಕಾನೂನುಗಳು ಅಗತ್ಯವೋ ಅಷ್ಟನ್ನೂ ಸಹ ಮನನ ಮಾಡಬೇಕು. ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ದುರಂತವೇ ಸರಿ. ಪ್ರತಿಯೊಬ್ಬರು ಕಾನೂನು ಅರಿವು ಪಡೆದು ಇತರರಿಗೂ ಜಾಗೃತಿ ಮೂಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಸಾಕ್ಷಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲಾಗಿತ್ತು. ಇದರಿಂದ ನ್ಯಾಯಾಲಯಕ್ಕೆ ಸಾರ್ವಜನಿಕರು ಅಲೆಯುವುದು ಕಡಿಮೆಯಾಗಿತ್ತು. ದೂರದ ಸ್ಥಳದಲ್ಲಿರುವ ಸಾಕ್ಷಿಗಳ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆ  ಉತ್ತಮ ಬೆಳವಣಿಗೆಯಾಗಿದೆ ಎಂದು ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ ಅಭಿಪ್ರಾಯಪಟ್ಟರು.
ಆರಂಭದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಂದೀಶ್‌ಕುಮಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸುವ, ಅಳವಡಿಸಿಕೊಳ್ಳುವ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಕುರಿತು ಅರಿವು ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರಿನ ನಿವೃತ್ತ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಎಸ್.ಆರ್. ಸೋಮಶೇಖರ್ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. 
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈ.ಎಸ್.ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಕಾರ್ಯದರ್ಶಿ ಎಂ. ಶ್ರೀಧರ್, ನ್ಯಾಯಾಧೀಶರಾದ ರೋಷನ್ ಷಾ, ಚಂಪಕಾ, ಸರ್ಕಾರಿ ವಕೀಲರಾದ ಗುರುಸ್ವಾಮಿ, ಪೊಲೀಸ್ ಅಧಿಕಾರಿಗಳು, ಇತರರು ಕಾರ್ಯಾಗಾರದಲ್ಲಿ ಇದ್ದರು.