ಗುಂಡ್ಲುಪೇಟೆ: ಶೋಷಿತ ಸಮುದಾಯದವರಲ್ಲಿ ನಾಯಕತ್ವದ ಕೊರತೆ ಇದ್ದು, ಇತಿಹಾಸ ಮತ್ತು ಚರಿತ್ರೆ ಓದುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಸಲಹೆ ನೀಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ನಿತ್ಯ ಚೇತನ ಟ್ರಸ್ಟ್ ಉದ್ಘಾಟನೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ನಮ್ಮ ಸಮುದಾಯಕ್ಕೆ ಸರಿಯಾದ ರೀತಿಯ ಬೆಲೆ ಇಲ್ಲ. ಇದಕ್ಕೆ ಪ್ರಮುಖ ಕಾರಣ ಒಗ್ಗಟ್ಟಿನ ಕೊರತೆ ಎಂದರು.
ಹಿಂದೆ ನಮ್ಮ ಹಕ್ಕುಗಳನ್ನು ಪಡೆಯಲು ಯಾವ ರೀತಿ ಪ್ರತಿಭಟನೆ ಮಾಡುತ್ತಿದ್ದೆವೋ ಈಗಲೂ ಸಹ ಅದೇ ಪರಿಸ್ಥಿತಿ ಇದೆ. ಸ್ಮಶಾನ, ಕುಡಿಯುವ ನೀರು, ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ದ ಹೋರಾಟ ನಡೆಸಬೇಕಾಗಿದೆ. ದೇಶದಲ್ಲ 1 ಲಕ್ಷ 12 ಸಾವಿರ ದಲಿತ ಸಂಘಟನೆಗಳಿದ್ದರೂ ಸಹ ಜನರು ಇಂದು ಬೀದಿಯಲ್ಲೇ ಇದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಮುದಾಯದ ಜನರನ್ನು ಮುನ್ನಡೆಸುವ ನಾಯಕತ್ವದ ಕೊರತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಚೇತನ ಟ್ರಸ್ಟ್ ಉತ್ತಮ ಧ್ಯೇಯ ಇಟ್ಟುಕೊಂಡು ಸ್ಥಾಪನೆಯಾಗಿದ್ದು, ಸಮಾಜವನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿದೆ. ಟ್ರಸ್ಟ್ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು. ಜೊತೆಗೆ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ಇತಿಹಾಸ ಓದಿ ಹೆಚ್ಚಿನ ಜ್ಞಾನಾರ್ಜನೆ ಪಡೆಯಬೇಕು. ಪ್ರಸ್ತುತ ನಮ್ಮನ್ನಾಳುವ ನಾಯಕರಿಗೆ ಅಧ್ಯಯನದ ಕೊರತೆ ಇದ್ದು, ಅವರು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಬೇಕು. ಹೆಚ್ಚಿನ ಅಧ್ಯಯನದಿಂದ ಮತ್ತೊಬ್ಬ ಅಂಬೇಡ್ಕರ್ ಆಗಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಮಾತನಾಡಿ, ಪ್ರಸ್ತುತ ನಮ್ಮ ಜನಾಂಗದವರನ್ನು ಯಾರು ನಂಬುತ್ತಿಲ್ಲ. ಎಲ್ಲರೂ ನಂಬುವಂತೆ ನಾವೇ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಬದಲು ಪ್ರತಿಯೊಬ್ಬರು ತಮಗೆ ಇಷ್ಟ ಬಂದ ದಾರಿಯಲ್ಲಿ ನಡೆಯುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳದೆ ಅವರ ಶ್ರಮವನ್ನು ವ್ಯರ್ಥ ಮಾಡುತ್ತಿದ್ದೇವೆ. ಜಗಜೀವನರಾಂ ನಂತರ ಮಾದಿಗ ಸಮುದಾಯ ಒಡೆದು ಹೋಗಿದ್ದು, ಗುಲಾಮರಂತೆ ಬದುಕುತ್ತಿದ್ದೇವೆ ಎಂದರು.
ಬಿ. ರಾಚಯ್ಯ ಅವರು ರಾಜ್ಯ ಸೇರಿದಂತೆ ಜಿಲ್ಲೆಗೆ ಹೆಚ್ಚಿನ ಕೊಡುಗೆ ನೀಡಿದ್ದರೂ ಸಹ ಇಂದು ಅವರನ್ನು ಯಾರು ಸ್ಮರಿಸುತ್ತಿಲ್ಲ. ಆದ್ದರಿಂದ ಯುವಕರು ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಜನಾಂಗವನ್ನು ಮುನ್ನಡೆಸಬೇಕು. ರಾಜಕೀಯ, ಬುದ್ದಿವಂತಿಕೆ, ಚತುರತೆ ತೋರಿಸಿದಾಗ ಮಾತ್ರ ಬೇರೆ ದಿಕ್ಕಿನಲ್ಲಿ ನಡೆಯಬಹುದು. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲಿಯೂ ಬೆಳೆಯಲು ಶಿಕ್ಷಣ ಅವಶ್ಯಕತೆಯಿದ್ದು, ಹೆಚ್ಚೆಚ್ಚು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಪುಟ್ಟಸಿದ್ದಯ್ಯ ಮಾತನಾಡಿ, ನಾನು ಮಾದಿಗ ಜನಾಂಗದಲ್ಲಿ ಹುಟ್ಟಿ ವೈದ್ಯನಾಗುವ ತನಕ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದ್ದೇನೆ. ಆದ್ದರಿಂದಲೇ ಒಂದು ಶಾಲೆ ಆರಂಭಿಸಿದ್ದು, ಇದರಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ಓದಿ ಇಂದಿಗೂ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜನರು ಮೌಢ್ಯವನ್ನು ಬಿಟ್ಟು ಛಲದಿಂದ ಓದಿದರೆ ಏನು ಬೇಕಾದರು ಸಾಧಿಸಬಹುದು. ಈ ನಿಟ್ಟಿನಲ್ಲಿ ಸಮುದಾಯದ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಮುಂದೆ ಬರಬೇಕು. ದೇವರನ್ನು ನಂಬಿ ಮೋಸ ಹೋಗುತ್ತಿದ್ದು, ಸಾವಿರಾರು ವರ್ಷದಿಂದಲೂ ಗುಲಾಮರಾಗಿಯೇ ಬದುಕುತಿದ್ದೇವೆ. ದೇವರಿಲ್ಲ ಎಂದು ಬಸವಣ್ಣ ಹೇಳಿದ್ದು, ಅವರ ಹಾದಿಯಲ್ಲಿಯೇ ನಡೆಯಬೇಕು ಎಂದು ಸಲಹೆ ನೀಡಿದರು.
ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಂಗಾರ್ ಆಚಾರ್, ಡಾ.ಪುಟ್ಟಸಿದ್ದಯ್ಯ ಸೇರಿದಂತೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲಿಂಗರಾಜು, ಸಬ್ ಇನ್ಸ್‌ಪೆಕ್ಟರ್ ಜೆ. ರಾಜೇಂದ್ರ, ರಾಜಮ್ಮ ಪುಟ್ಟಸಿದ್ದಯ್ಯ, ನಿತ್ಯ ಚೇತನ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ, ಆದಿ ಜಾಂಬವ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಹಸಗೂಲಿ ಸಿದ್ದಯ್ಯ, ಸೃಷ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವೃಷಬೇಂದ್ರ, ಮಹೇಶ್, ವಕೀಲರಾದ ಗಂಗಾಧರ್, ನಿತ್ಯ ಚೇತನ ಟ್ರಸ್ಟ್ ಪದಾಧಿಕಾರಿಗಳಾದ ಲಿಂಗರಾಜು, ಸಿದ್ದರಾಜು, ರಾಜೇಂದ್ರ, ಶಂಕರ್, ಮಣಿಕಂಠ, ನಂಜುಂಡಸ್ವಾಮಿ, ಮಹದೇವಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ