ಚಾಮರಾಜನಗರ: ತಾಲೂಕಿನ ದೇಮಹಳ್ಳಿಮೋಳೆ ಗ್ರಾಮದಲ್ಲಿ ಶಿಥಿಲಾವಸ್ಥೆಗೊಳಗಾಗಿದ್ದ ಶಾಲಾಕಟ್ಟಡವನ್ನು ದಾನಿಗಳು ಸೇರಿದಂತೆ ಶಾಲಾಶಿಕ್ಷಕಿಯರು ತಾವು ಕೈಜೋಡಿಸಿ ಹಣಸಂಗ್ರಹಿಸಿ ಶಾಲಾಕಟ್ಟಡವನ್ನು ದುರಸ್ತಿ ಪಡಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ನೂತನ ಕಲಿಕಾಸ್ನೇಹಿ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸರಕಾರದ ಅನುದಾನಕ್ಕಾಗಿ ಕಾಯದೇ, ಶಿಕ್ಷಕರು ತಮ್ಮ ಜತೆ ದಾನಿಗಳಿಂದ ೧ಲಕ್ಷ ರೂ. ಹಣಸಂಗ್ರಹ ಮಾಡಿ, ದುರಸ್ತಿಗೊಳಗಾಗಿದ್ದ ಕಟ್ಟಡವನ್ನು ದುರಸ್ತಿ ಪಡಿಸಿ, ಶಾಲಾಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಇಲ್ಲಿಯ ಕೆಲಸ ನೋಡಿದರೆ ೧ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಮಗಾರಿ ನಿರ್ವಹಿಸಿದ್ದಾರೆ. ಇದು ಎಲ್ಲರೂ ಮೆಚ್ಚುಗೆಪಡುವ ವಿಚಾರ ಎಂದರು.
ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಶಿಕ್ಷಕಿಯರಾದ ಸರಸ್ವತಿ, ಕೋಮಲ ಹಾಜರಿದ್ದರು.