
ಭಾರತ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ೩ ಪಂದ್ಯಗಳ ಟಿ೨೦ ಸರಣಿ ಆಡಳಿದೆ. ಇಂದು ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ೨೦ ಓವರ್ಗಳ ಅಂತ್ಯಕ್ಕೆ ವೆಸ್ಟ್ ಇಂಡೀಸ್ ೫ ವಿಕೆಟ್ ಕಳೆದುಕೊಂಡು ೭೧ ರನ್ ಗಳಿಸಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಆರಂಭವಾಗಿದೆ. ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇದು ಭಾರತದ ೧೦೦೦ನೇ ಏಕದಿನ ಪಂದ್ಯ ಎಂಬ ವಿಶೇಷ ಒಂದೆಡೆಯಾದರೆ, ಈ ಐತಿಹಾಸಿಕ ಪಂದ್ಯಕ್ಕೂ ಮುನ್ನ ಭಾರತದ ಹೆಸರಾಂತ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ ಎಂಬ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಹೀಗಾಗಿ ಭಾರತ ತಂಡದ ತಂಡದ ಕ್ರಿಕೆಟ್ ಆಟಗಾರರು ಈ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದೆ. ಅಷ್ಟೇ ಅಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನಾಚರಣೆ ನಡೆಸಿ ಗೌರವ ಸಮರ್ಪಿಸಿದರು.
ಲತಾ ಮಂಗೇಶ್ಕರ್ ಅವರು ಇಂದು ಮುಂಬೈನಲ್ಲಿ ೯೨ ನೇ ವಯಸ್ಸಿನಲ್ಲಿ ನಿಧನರಾದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು. ಲತಾ ಮಂಗೇಶ್ಕರ್ ನಿಧನಕ್ಕೆ ಟೀಮ್ ಇಂಡಿಯಾ ಆಟಗಾರರ ಹೊರತಾಗಿ ಭಾರತದ ಮಾಜಿ ಕ್ರಿಕೆಟಿಗರು ಕೂಡ ಸಂತಾಪ ಸೂಚಿಸಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಲತಾ ಮಂಗೇಶ್ಕರ್ ಅವರ ನಿಧನ ದೊಡ್ಡ ನಷ್ಟ ಎಂದು ಬಣ್ಣಿಸಿದ್ದಾರೆ. ಲತಾ ಜಿ ಅವರು ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಇದೀಗ ಇಡೀ ದೇಶವೇ ಗಾನ ಕೋಗಿಲೆಯನ್ನು ಕಳೆದುಕೊಂಡ ದುಖಃದಲ್ಲಿದೆ ಎಂದು ಲಿಟಲ್ ಮಾಸ್ಟರ್ ಹೇಳಿದರು.