ಚಾಮರಾಜನಗರ: ವೃದ್ದರೊಬ್ಬರು ಹಿಟ್ ಅಂಡ್ ರನ್ ಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ದೊಡ್ಡರಾಯಪೇಟೆ ಗ್ರಾಮದ ನಿವಾಸಿ ಸಿದ್ದಯ್ಯ (೭೫) ಎಂಬುವರೇ ಹಿಟ್ ಅಂಡ್ ರನ್ ಗೆ ಬಲಿಯಾದವರು. ಇವರು ಮನೆಯಿಂದ ರಾತ್ರಿ ವೇಳೆ ಬಹಿರ್ದೆಸೆಗೆಂದು ದೊಡ್ಡರಾಯಪೇಟೆಯ ಮುಖ್ಯ ರಸ್ತೆಯಲ್ಲಿ ತೆರಳಿದ್ದ ವೇಳೆ ಅಪರಿಚಿತ ವಾಹನವೊಂದು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ವೃದ್ಧ ಸಿದ್ದಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ದೊಡ್ಡರಾಯಪೇಟೆ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ವೀಕ್ಷಿಸಿದರು. ಬಳಿಕ ಗ್ರಾಮಸ್ಥರು ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಮಹಜರ್ ನಡೆಸಿ ಅಪಘಾತ ನಡೆಸಿದ ವಾಹನ ಪತ್ತೆಗೆ ಮುಂದಾಗಿದ್ದಾರೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.

By admin