-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ನಾನು ಇಲ್ಲಿ ವಿವರಿಸುವ ಪೂರ್ವವಿಕಲ್ಪಗಳೆಲ್ಲವೂ ನಮ್ಮಿಂದಾದ ನಮಗೆಯೇ ತಿಳಿದ ಸತ್ಯ ಸಂಗತಿ. ಹಾಗು ಸದಾ ಪರಿಸರ ಸ್ನೇಹಿ ಜಾಗೃತಿಗಳು ನಮಗಾಗುತ್ತಿರುವುದು ನಮ್ಮವರಿಂದಲೇ. ನಮ್ಮವರು ಹೇಳುವಾಗ ಕೇಳದಿರುವುದೇ ಪ್ರಕೃತಿ ಹೇಳಲು ಆರಂಭಿಸಿ ಅಂತ್ಯದ ನರ್ತನವಾಗುತ್ತಿದೆ.ಇಲ್ಲಿ ಪ್ರಜ್ಞಾ ಸ್ಥಿತಿಯಲ್ಲಿರುವ ಮಾನವರೆಲ್ಲಾ ಆ ಪ್ರಜ್ಞೆಯನ್ನು ಹಲವು ವಿಧದ ಜೀವನದ ಮಾರ್ಪಾಡುಗಳಿಗೆ ವಿನಿಯೋಗ ಮಾಡುತ್ತಿದ್ದಾರೆ.

ಆ ಪ್ರಜ್ಞೆಯ ವಿನಿಯೋಗದಲ್ಲಿ ಪ್ರಕೃತಿಯಿಂದಾಗುವ ಲಾಭವನಷ್ಟೇ ಪರಿಗಣಿಸಿ ಉಚಿತವಾಗಿ ಸಿಗುವ ಅರಣ್ಯ ಸಂಪತ್ತನ್ನು ಸಂಪೂರ್ಣ ಬಳಕೆಗೆ ಮನಸ್ಸು ಮಾಡಿರುವುದು ಪ್ರಪಾತಕ್ಕೆ ಎಲ್ಲರೂ ಬೀಳಲೋಗುತ್ತಿರುವ ಮನ್ಸೂಚನೆಯಾಗಿದೆ‌.ಅಪಹಾಸ್ಯದ ಸಂಗತಿ ಎಂದರೆ ಬೆಲೆಬಾಳುವ ಮರಗಳಿಂದ ಮನೆಗಳನ್ನು ಕಟ್ಟಿ ಸಮಾಜದಲ್ಲಿ ಒಣ ಶ್ರೀಮಂತಿಕೆಯನ್ನು ಮತ್ತು ವೈಭೋಗಯುತ ಜೀವನದ ಪ್ರದರ್ಶನಕ್ಕಾಗಿ ಮುಗಿಬೀಳುತ್ತಿರುವುದು ಪ್ರಸ್ತುತ ಮಾನವ ಸಂಪರ್ಕದ ಕೊಂಡಿಯನ್ನು ತಪ್ಪಿಸಿ ಪ್ರಕೃತಿ ಮಾನವನನ್ನು  ಮನೆಯಲ್ಲೇ ಕೂರಿಸಿದೆ.ಇನ್ನೂ ಮಾನವನ ಈ ಅರಣ್ಯಸಂಪತ್ತಿನ ಬಳಕೆಯಲ್ಲಿನ ವೈಭೋಗ ಹೆಚ್ಚಾದರೆ ಸಿಂಗರಿಸಿ ಕಟ್ಟಿದ ಮನೆಗಳೇ ಸಮಾಧಿಗಳಾಗುವುದರಲ್ಲಿ ಮತ್ತು ಐಷರಾಮಿ ಪಟ್ಟಣಗಳೇ ಸ್ಮಶಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ಇತ್ತೀಚೆಗೆ ಒಬ್ಬ ವ್ಯಕ್ತಿ ಪ್ರಕೃತಿ ನಾಶದ ಜಾಗೃತಿ ಮೂಡಿಸಲು ಒಂದು ಗಿಡ ಇರುವ ಡಬ್ಬಿ ಹಿಡಿದು ಅದರಿಂದ ಆಮ್ಲಜನಕ ಅಥವಾ ಶುದ್ಧಗಾಳಿ ಸೇವಿಸುತ್ತಿರುವ ಹಾಗೆ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿತ್ತು.
ಇದು ಎಲ್ಲಾ ಕಡೆ ಜನಪ್ರಚಾರವೂ ಆಗಿತ್ತು.ಆ ವ್ಯಕ್ತಿ ತೋರಿಸಿದ ಚಿತ್ರಣ ಇನ್ನು ಐವತ್ತು ವರ್ಷದ ಮುಂದಿನದು ಏನೋ ಇರಬೇಕು ಮತ್ತು ಈಗಿನ ಕೈಗಾರೀಕರಣ,ನಗರೀಕರಣದ  ಈ ರೀತಿಯ ಅಪಾಯಕಾರಿ ಬೆಳವಣಿಗೆಯ ಊಹೆಯಾಗಿರಬೇಕು ಎಂದು ತಿಳಿದಿದ್ದೆವು.ಆದರೆ ಐವತ್ತು ವರ್ಷದ ಮುಂದಿನ ಊಹೆ ಈ ಐದು ತಿಂಗಳಲ್ಲೇ ಬಂದೊದಗಿ ಬಿಟ್ಟಿತ್ತು.ಈ ಕರೋನಾ ಹೀನ ಮತ್ತು ಕಾಣದ ವೈರಾಣುವಿನ ಅಟ್ಟಹಾಸಕ್ಕೆ ಅತೀ ಹೆಚ್ಚು ಜನ ಆಮ್ಲಜನಕದ ಕೊರತೆಯಿಂದಲೇ ಸತ್ತಿರುವುದು.ಚಾಮರಾಜನಗರದ ಧಾರುಣವಾಗಿ 24ಕ್ಕೂ  ಅಧಿಕ ಮಂದಿ ಒಂದೇ ದಿನ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಆಮ್ಲಜನಕದ ಕೊರತೆಯಿಂದ ಸತ್ತಿರುವುದು ಈ ಅತ್ಯಾಧುನಿಕ ಉಪಕರಣ ,ತಂತ್ರಜ್ಞಾನ, ಮತ್ತು ಎಲ್ಲಾ ರೀತಿಯಲ್ಲೂ ಮುಂದುವರೆದಿರುವ ಸಮಯದಲ್ಲಿ ನಡೆದಿರವ ಈ ಘಟನೆ ವಿಷಾಧನೀಯ. ಮಾನವ ಎಷ್ಟೇ ಮುಂದುವರೆದರೂ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ತಯಾರಿಸಲು ಆತನಿಂದ ಸಾಧ್ಯವಿಲ್ಲ.
ಹಾಗು ಅದರ ಮೇಲೆ ಹಿಡಿತ ಅಥವಾ ದಬ್ಬಾಳಿಕೆ ನಡೆಸಲು ತೋರುವ ಪ್ರಯತ್ನಗಳೆಲ್ಲವೂ ಆತನ ನನಸಾಗದ ಕನಸ್ಸು ಎಂದು ಪ್ರಕೃತಿ ಆಗಾಗ್ಗೇ ಎಚ್ಚರಿಸುವ ವಿಕೋಪಗಳೇ ಸಾಕ್ಷಿ‌.ನಿಸರ್ಗವು ಇಡೀ ಜಗತ್ತನ್ನೇ ಸಲಹುತ್ತಿದೆ. ಹಲವು ವಿಸ್ಮಯಗಳಿಂದ ರಂಜಿಸುತ್ತಿದೆ.ಈ ಮನರಂಜನೆಯನ್ನು ಸವಿಯದ ಮಾನವರೇ ದಡ್ಡರು.ಮಾನವನಿಗೆ ಸಂಬಂಧಗಳು ಮಾನವ ಜಗತ್ತಿನಲ್ಲಿಯೇ ಕಂಡುಕೊಳ್ಳಬೇಕೆಂಬ ಭ್ರಮೆ ಇರುವುದು ಇದಕ್ಕೆಲ್ಲಾ ಕಾರಣ. ಮನುಷ್ಯರಾದವರು ಅಥವಾ ಮನುಷ್ಯತ್ವ ಉಳ್ಳವರು ಪ್ರಕೃತಿಯಲ್ಲಿರುವ ಸಕಲ ಜೀವರಾಶಿಗಳಲ್ಲೂ ಸಂಬಂಧವನ್ನು ಕಾಣುವರು.
ಇದಕ್ಕೆ ಸಾದೃಶ್ಯ ರೂಪವಾಗಿ ಇನ್ನೂ ನಮ್ಮೊಂದಿಗೆ ಜೀವಂತಿಕೆಯ ಹಸಿರಿನ ಉದಾಹರಣೆಯಾಗಿರುವ ಸಾಲುಮರದ ತಿಮ್ಮಕ್ಕ ಒಬ್ಬರು. ಇವರಿಗೆ ಮಕ್ಕಳಿಲ್ಲದ ಕಾರಣ ಆ ಮಕ್ಕಳಿನ ಪ್ರೀತಿಯನ್ನು ಮತ್ತು ತಾಯಿ ಮಕ್ಕಳಿಗೆ ನೀಡಬೇಕಾದ ಮಮತೆಗೆ ಕೊರತೆಯನ್ನು ಎದುರಿಸಲಿಲ್ಲ. ಬದಲಿಗೆ ಪ್ರಕೃತಿಯನ್ನೇ ಸಂಬಂಧಗಳನ್ನಾಗಿ ಪಡೆದರು ನೂರಕ್ಕೂ ಅಧಿಕ ಸಸಿಗಳನ್ನು ನೆಟ್ಟು ತನ್ನ ತಾಯಿ ಮಮತೆಯನ್ನು ಅವುಗಳಿಗೆಲ್ಲಾ ಧಾರೆ ಎರೆದು ಆ ಸಸಿಗಳನ್ನೇ ಮಕ್ಕಳನ್ನಾಗಿ ಪಡೆದ ಮಾತೆಯ ಶ್ರಮ ಇಂದು ಆ ಮಕ್ಕಳು ಎಷ್ಟೋ ಜನರಿಗೆ ಉಸಿರಾಡಲು ಶುದ್ಧ ಉಸಿರಾಗಿ,ನೋಡಲು ಹಸಿರಾಗಿ, ದಣಿದು ಬಂದವರಿಗೆ ನೆರಳಾಗಿ ಆಶ್ರಯವಾಗಿವೆ.ಹಾಗೆಯೇ ಛಾಯಾಗ್ರಾಹಕ ಮತ್ತು ಪರಿಸರ ಪ್ರೇಮಿಗಳ ಹೃದಯ ಸ್ನೇಹಿ ಆದ ಅರಣ್ಯ ರಕ್ಷಕ ಬೈಜು ಅವರು ಮೂಲತಃ ಕಳ್ಳಬಟ್ಟಿ ತಯಾರಿಸುತ್ತಿದ್ದವರು ಮತ್ತು ಆದಿವಾಸಿಗಳ ಗುಂಪಲ್ಲೇ ಅತೀ ಹೆಚ್ಚಾಗಿ ಬೆಳೆದು ನಿತ್ಯ ಅರಣ್ಯ ಸಂಪರ್ಕಕ್ಕೆ ಒಳಗಾದವರು.ಅರಣ್ಯವನ್ನು ಪ್ರೀತಿಸುತ್ತಾ ಅರಣ್ಯದ ಗಾಢ ಕಾಳಜಿಯೊಂದಿಗೆ ಕಳ್ಳಬಟ್ಟಿ ತಯಾರಿಸುವುದ ಬಿಟ್ಟು ಮನುಷ್ಯತ್ವದ ಧೀಕ್ಷೆ ಪಡೆದರು.ಇಲ್ಲಿ ಪ್ರಕೃತಿಯು ಮಾನವನಿಗೆ ಮುಷ್ಯತ್ವದ ಧೀಕ್ಷೆ ಕೊಡುತ್ತದೆ ಎನ್ನುವುದಕ್ಕೆ ಅರಣ್ಯ ರಕ್ಷಕ ಬೈಜು ಅವರು ಸತ್ಯನಿದರ್ಶನರಾಗಿದ್ದಾರೆ.ಮನುಷ್ಯತ್ವರಾದ ಬೈಜು ವನ್ಯಜೀವಿ ಪ್ರೇಮಿ.ವನ್ಯಜೀವಿಗಳೊಂದಿಗೆ ,ವನದೊಂದಿಗೆ ಸಂಬಂಧಗಳನ್ನು ಬೆಸೆದುಕೊಂಡು ಅವುಗಳನ್ನು ನಿತ್ಯ ಪ್ರೇಮಿಸುವುದು ಸಲಹುವುದನ್ನೇ ಅವರ ಬದುಕನ್ನಾಗಿ ಮಾರ್ಪಿಸಿಕೊಂಡರು.ಅತೀವ ಆನಂದವನ್ನು ಪಡೆದುಕೊಂಡರು.
ಆ ಪ್ರಕೃತಿ ಸಂಬಂಧಗಳೊಂದಿಗೆ ಐಕ್ಯರಾದರು.ಬೈಜು ಇಂದು ನಮ್ಮೊಂದಿಗಿಲ್ಲ ಆದರೆ ಅವರ ಸಂಬಂಧಗಳನ್ನು ಅದರಲ್ಲಿರುವ ಮಹತ್ವವನ್ನು ನಮಗಾಗಿ‌ ಬಿಟ್ಟುಹೋಗಿದ್ದಾರೆ.ನಾವು ಅದನ್ನು ನಾಶಪಡಿಸದೇ ನಮ್ಮ ಸಂಬಂಧಗಳನ್ನಾಗಿ ಪಡೆಯೋಣ‌.ಸಿಂಧೂ ನಾಗರಿಕತೆಯ  ಕುಡಿಗಳಾದ ನಾವು ನಮ್ಮ ನಾಗರೀಕತೆಯನ್ನು ಮರೆತಿದ್ದೇವೆ.ಪ್ರಕೃತಿ ಆರಾಧನೆ ಸಿಂಧೂ ನಾಗರೀಕತೆಯ ದೈವಿಕತ್ವದ ಅಂಶ.ಇಂದು ನಮ್ಮ ಮೂಢ ನಂಬಿಕೆಗಳನ್ನು ವೈಚಾರಿಕ ನೆಲೆಯಲ್ಲಿ ಅಳೆದು ನಾವು ನಮ್ಮನ್ನು ಸರಿಮಾಡಿಕೊಳ್ಳುತ್ತಿಲ್ಲ ಬದಲಾಗಿ ಪ್ರಕೃತಿಯಲ್ಲಿರುವ ನಿಜಗುಣವನ್ನು ಅಥವಾ ನಿಜ ಧರ್ಮವನ್ನು ಅವಮಾನಿಸುತ್ತಿದ್ದೇವೆ. ಮರಗಿಡಗಳನ್ನು ದೇವರೆಂದು ಸುತ್ತುವುದರಿಂದ ನಮಗೆ ಆ ಮರಗಿಡಗಳಲ್ಲಿನ ಔಷದೀಯ ಶಕ್ತಿ ದೊರಕುತಿತ್ತು.ಪಶು ಪ್ರಾಣಿಗಳನ್ನು ಪೂಜಿಸುವುದರಿಂದ ಸಕಲಜೀವರಾಶಿಗಳಲ್ಲೂ ದಯೆತೋರಬೇಕು ಎನ್ನುವ ಮನುಷ್ಯತ್ವ ನೆಲೆ ಆಚರಣೆಗೊಳ್ಳುತ್ತಿತ್ತು. ಪ್ರಾಣಿಹತ್ಯೆಯು ಸಂಭವಿಸುತ್ತಿರಲಿಲ್ಲ‌. ಆದರೆ ನಮ್ಮ ಸ್ವಾರ್ಥಗಳಿಗಾಗಿ ಮರಗಿಡಗಳನ್ನು ಸುತ್ತಿ ಮೌಢ್ಯತ್ವ ಬೆಳೆಸಿದ್ದು ನಾವೇ ಪಶುಪ್ರಾಣಿಗಳನ್ನು ಬೇರೆ ವಿಧದ ಮೌಢ್ಯತ್ವಗಳಲ್ಲಿ ಬಳಸಿಕೊಂಡದ್ದು ನಾವೇ.ಈಗ ಇದರಿಂದ ವೈಚಾರಿಕ ಪ್ರಜ್ಞೆಯ ನಾಲಿಗೆಗೆ ಸಿಕ್ಕಿ ಎಲ್ಲವೂ ಮೌಢ್ಯ ಎಂದಾಗಿಸಿಕೊಂಡಿದ್ದು ನಾವೇ.ಹೀಗಾಗಿ ಮರಗಿಡಗಳೊಂದಿಗೆ ಪಶುಪ್ರಾಣಿಗಳೊಂದಿಗೆ ಇದ್ದ ನಮ್ಮ ಸಂಬಂಧ ಕ್ಷೀಣಿಸಿತು.ಪ್ರಕೃತಿಯಿಂದ ದೂರ ಸರಿಯುವುದನ್ನೇ ಜೀವನಶೈಲಿಯನ್ನಾಗಿ ಪಡೆದುಕೊಂಡ ನಾವೇ ಇಂದು ಅಪಾಯಕ್ಕೆ  ಒಳಗಾಗಿದ್ದೇವೆ.
ಮೌಢ್ಯದಿಂದ ಪ್ರಕೃತಿಯನ್ನು ಆರಾಧಿಸುವುದು ಬೇಡ ಪ್ರಜ್ಞಾಪೂರ್ವಕವಾಗಿ ಸಂಬಂಧಗಳನ್ನಾಗಿ ಬೆಸೆದುಕೊಂಡು ಪ್ರಕೃತಿಯನ್ನು ಆರಾಧಿಸೋಣ ಮತ್ತು ನೆಮ್ಮದಿಯಾಗಿ ಬದುಕೋಣ.ಪ್ರಕೃತಿಯಿಂದ ದೊರಕುವ ಮನುಷ್ಯತ್ವದ ಧೀಕ್ಷೆಗೆ ಭಾಜನರಾಗೋಣ. ಈ ಸಂಬಂಧಗಳನ್ನು ಬೆಸೆಯುವ ಬಗೆಯಲ್ಲಿ ಪ್ರಕೃತಿಯನ್ನು ಪ್ರಾರ್ಥಿಸೋಣ. ಪ್ರಕೃತಿಯು ತನ್ನ ನಿಯಮಕ್ಕೆ ನಮ್ಮನ್ನು ಒಗ್ಗಿಸಿಕೊಳ್ಳಲು ನಾವು ಅಣಿಯಾಗೋಣ. ನಾವು ಪ್ರಕೃತಿಯಾಗೋಣ.ಪ್ರಕೃತಿಯೇ ಆದ ನಾವು ಈ ವಿಕೋಪಗಳನ್ನು ಇನ್ನು ಮುಂದೆ ಕಾಣದಿರೋಣ.

By admin