ಗುಂಡ್ಲುಪೇಟೆ: ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕರ್ನಾಟಕದಲ್ಲಿ ಹಿಂದಿ ಹೇರಿಕೆಯಂತಹ ವಿಚಾರವನ್ನು ಮುನ್ನಲೆಗೆ ತರುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್.ಆರ್ ಲಕ್ಕೂರು ಆಕ್ರೋಶ ಹೊರಹಾಕಿದರು.

ಹಿಂದಿ ರಾಷ್ಟ್ರ ಭಾಷೆಯಲ್ಲದಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ದಿನೇ ದಿನೇ ದೇಶದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಡುತ್ತಿರುವುದು ನೋಡಿದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಲು ಹುನ್ನಾರ ನಡೆಸುತ್ತಿದೆ ಎಂಬುದು ತಿಳಿಯುತ್ತದೆ. ಬಿಜೆಪಿ ಸರ್ಕಾರ ಹಿಂದೆ ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಲು ಸಾಧ್ಯವಾಗದೆ. ಈಗÀ ಭಾಷೆಗಳ ಮೇಲೆ ಸಂಘರ್ಷ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ಭಾರತ ದೇಶ ಬಹು ಸಂಸ್ಕೃತಿ ಹಾಗೂ ಬಹು ಭಾಷೆಗಳ ನಾಡು. ಪ್ರತಿಯೊಂದು ಪ್ರಾದೇಶಿಕ ಭಾಷೆಯು ಅಲ್ಲಿನ ವೈವಿದ್ಯತೆಯನ್ನು ಎತ್ತಿ ಹಿಡಿಯುತ್ತಿದೆ. ಅದರಲ್ಲಿಯೂ ಕನ್ನಡಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಜೊತೆಗೆ ಕರ್ನಾಟಕ ಬಸವಣ್ಣ, ಕನಕದಾಸ, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ಡಾ.ರಾಜ್ ಕುಮಾರ್ ಅಂತಹ ಮಹಾನಾಯಕರ ನಾಡಾಗಿದ್ದು, ಇಲ್ಲಿ ಕನ್ನಡವೇ ಸಾರ್ವಭೌಮ. ಹೀಗಿರುವಾಗ ಹಿಂದಿ ಹೇರಿಕೆಯನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಹಾಗೂ ಚಿತ್ರನಟ ಅಜಯ್ ದೇವಗನ್ ಸೇರಿದಂತೆ ಕೆಲವು ಮಂದಿಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಹಿಂದಿ ಕನ್ನಡದವರಿಗೆ ಅರ್ಥವಾಗುತ್ತದೆ. ಆದರೆ ನಮ್ಮನ್ನು ಪ್ರಶ್ನೆ ಮಾಡುವವರಿಗೆ ಕನ್ನಡ ಅರ್ಥವಾಗುತ್ತದೆಯೇ? ಎಂದು ಕುಟುಕಿ, ಕನ್ನಡ ಚಿತ್ರರಂಗ ಹಿಂದಿ ಭಾಷೆ ಹೇರಿಕೆ ವಿರುದ್ಧ ಗಟ್ಟಿಧ್ವನಿ ಮಾಡಬೇಕು ಎಂದು ಮನವಿ ಮಾಡಿದರು.

ವರದಿ: ಬಸವರಾಜು ಎಸ್.ಹಂಗಳ