ಚಾಮರಾಜನಗರ: ತಂಬಾಕು ಸೇವನೆಯಿಂದ ಹದಿಹರೆಯದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ. ಶ್ರೀಧರ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ವ್ಯಸನಕ್ಕೆ ಒಳಪಟ್ಟ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರ ಕುಟುಂಬವೂ ಸಹ ತೊಂದರೆಗೆ ಒಳಗಾಗಬೇಕಾಗುತ್ತದೆ. ತಂಬಾಕು ಉತ್ಪಾದನೆಯಿಂದ ಮನುಷ್ಯರಲ್ಲದೇ ಭೂಮಿ, ಪರಿಸರ ಹಾಗೂ ಜೀವಸಂಕುಲಗಳು ಸಹ ನಾಶವಾಗುತ್ತಿವೆ. ಇದಕ್ಕಾಗಿ ಯುವ ಪೀಳಿಗೆಯನ್ನು ತಂಬಾಕು ಮುಕ್ತವಾಗಿ ಪರಿವರ್ತಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ತಂಬಾಕು ಸೇವನೆಗೆ ದಾಸ್ಯರಾಗಿರುವವರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವುದರಿಂದ ತಂಬಾಕು ವ್ಯಸನದಿಂದ ಮುಕ್ತ ಮಾಡಬಹುದು ಎಂದು ಸಲಹೆ ನೀಡಿದರು.
ಅತಿಯಾದರೆ ಅಮೃತ ಕೂಡ ವಿಷ ಎಂಬಂತೆ ದುಷ್ಚಟಗಳಿಗೆ ಒಳಗಾದರೆ ಯುವ ಜನತೆಯೂ ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸುತ್ತಮುತ್ತಲ ಜನರಿಗೆ ತಂಬಾಕು ಸೇವನೆಯಿಂದ ಆಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣದ ಘಟಕದ ಕಾರ್ಯಕ್ರಮ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಕಣ್ಗಾವಲು ಅಧಿಕಾರಿ ಡಾ. ನಾಗರಾಜು ಅವರು ಮಾತನಾಡಿ, ಯುವಜನತೆಯ ಪೈಕಿ ಸುಮಾರು ೧೪ ರಿಂದ ೨೦ ವರ್ಷ ವಯಸ್ಸಿನವರು ತಂಬಾಕು ಸೇವನೆಯ ದುಷ್ಚಟಕ್ಕೆ ಹೆಚ್ಚು ಒಳಗಾಗುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ತಂಬಾಕು ಸೇವನೆಯಿಂದ ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ತಂಬಾಕು ಬಳಕೆಯ ತ್ಯಾಜ್ಯದಿಂದ ನೀರು, ಮಣ್ಣು, ಗಾಳಿ ಸೇರಿದಂತೆ ಪರಿಸರ ವಿಷಪೂರಿತವಾಗುತ್ತಿದೆ. ಈ ಬಗ್ಗೆ ಹೆಚ್ಚು ಜಾಗರೂಕರಾಗಬೇಕು ಎಂದು ಡಾ. ನಾಗರಾಜು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ತಂಬಾಕು ಸೇವನೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಎರಡನೆ ಸ್ಥಾನದಲ್ಲಿದೆ. ಯುವಜನತೆಯು ಪ್ಯಾಷನ್‌ಗಾಗಿ ತಂಬಾಕು ಸೇವನೆಯನ್ನು ಪ್ರಾರಂಭಿಸಿ, ನಂತರ ವ್ಯಸನಿಗಳಾಗುತ್ತಿದ್ದಾರೆ. ಬಡವ ಶ್ರೀಮಂತ ಎನ್ನದೇ ತಂಬಾಕು ಸೇವನೆಯಲ್ಲಿ ತೊಡಗುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸುವುದು ಅಗತ್ಯ ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ಕಾಂತರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಸ್.ಎನ್. ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ನಾಗಮಲ್ಲೇಶ್, ತಾಲೂಕು ವೈದ್ಯಾಧಿಕಾರಿ ಡಾ. ಗಿರಿಧರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
