ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮ ವ್ಯಾಪ್ತಿಯ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಇದರಿಂದ ಹೊಂಡಗಳು ಏರ್ಪಟ್ಟು ಸಾವಿನ ಕೂಪಗಳಾಗುತ್ತಿವೆ.
ಹೇಮಾವತಿ ನದಿಯ ಕೌಡಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ನದಿ ದಡ ಮತ್ತು ನದಿಯೊಳಗೆ ಬೃಹತ್ ಹೊಂಡಗಳು ನಿರ್ಮಾಣವಾಗುತ್ತಿವೆ. ಇದನ್ನರಿಯದೆ ನದಿಯಲ್ಲಿ ಈಜಾಡಲು ಹೋಗುವ ಯುವಕರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಸಕಲೇಶಪುರದ ಕುಶಾಲನಗರ ಬಡಾವಣೆಯ ರೋಷನ್ ಎಂಬಾತ ಗೆಳೆಯರೊಂದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಸಂಬಂಧ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವೆಂಕಟೇಶ್ ಮತ್ತು ಕಂದಾಯ ಇಲಾಖೆ ಕಂದಯಾಧಿಕಾರಿ ಸುರೇಶ್ ಮತ್ತು ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ತಮ್ಮ ಮೇಲಾಧಿಕಾರಿಗಳಿಗೆ ಪ್ರತಿಯನ್ನು ಮೇ. 7ರಂದು ಕಳುಹಿಸಲಾಗಿದೆ ವಿನಃ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದ ಕಾರಣದಿಂದ ದಂಧೆ ಮುಂದುವರೆದಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಂಬಂಧಿಸಿದವರು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದ ಹೊರತು ಉಳಿಗಾಲವಿಲ್ಲ.

By admin