ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಚಂದ್ರಮೌಳೇಶ್ವರ ದೇವಸ್ಥಾನದ ಅಕ್ಕಪಕ್ಕದ ಸರ್ಕಾರಿ ಗೋಮಾಳದಲ್ಲಿ ಲೀಸ್ ನೆಪದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರಾಜಕೀಯ ಪ್ರಭಾವ ಬಳಸಿ ಕಲ್ಲು ಲೂಟಿ ಒಡೆಯಲಾಗಿದೆ. ಹೀಗಿದ್ದರೂ ಕೂಡ ಈ ಬಗ್ಗೆ ಅಧಿಕಾರಿಗಳು ಚಕಾರ ಎತ್ತದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹಿರೀಕಾಟಿ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಮುತ್ತಲಿನ ಜಾಗದಲ್ಲಿ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದು ಲೀಸ್ ನೀಡಿದ್ದಾರೆ ಎಂದು ದೊಡ್ಡಹುಂಡಿ, ಹಿರೀಕಾಟಿ, ಕೃಷ್ಣಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಹಿರೀಕಾಟಿ ಗ್ರಾಮದ ಸ.ನಂ.108ರಲ್ಲಿ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆದಿರುವ ಕಾರಣ ಕ್ವಾರಿಯ ಮದ್ಯದಲ್ಲಿರುವ ದೇವಸ್ಥಾನಕ್ಕೆ ಭಕ್ತರು ಜೀವ ಭಯದಲ್ಲಿ ಹೋಗುವಂತ ಸ್ಥಿತಿ ಎದುರಾಗಿದೆ. ದೇವಸ್ಥಾನ ಹಾಗು ಸ್ಮಶಾನದ ಸುತ್ತಲೂ ಕನಿಷ್ಟ 200 ಮೀಟರ್ ಗಣಿಗಾರಿಕೆ ಮಾಡುವಂತ್ತಿಲ್ಲ ಎಂದು ಅಧಿಕಾರಿಗಳು ಹಲವು ಬಾರಿ ಹೇಳಿದ್ದಾರೆ. ಆದರೆ ಇದನ್ನು ಉಲ್ಲಂಘಿಸಿ ಗಣಿಗಾರಿಕೆ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರಿ ಗೋಮಾಳದಲ್ಲಿ ಹಲವು ತಲೆಮಾರಿನಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ಗ್ರಾಮದ ಕೆಲ ಮಂದಿ ಜಮೀನನ್ನು ಪ್ರಭಾವ ಬಳಸಿ ಜಮೀನಿನಲ್ಲಿ ಕ್ವಾರಿ ಮಾಡಿರುವ ಕುರುಹುಗಳಿವೆ. ಈ ಹಿಂದೆ ಸ್ಮಶಾನದ ಜಾಗ ಸರ್ವೆ ನಡೆಸಿದ ಬಳಿಕ ಹದ್ದು ಬಸ್ತು ಮಾಡಿತ್ತು. ಗಣಿಗಾರಿಕೆ ಸಲುವಾಗಿ ಕೆಲ ಲೀಸ್‍ದಾರರು ಸ್ಮಶಾನದ ಗಡಿಯೊಳಗೆ ಮಣ್ಣು ಹಾಕುವ ಮೂಲಕ ಸ್ಮಶಾನ ಕಾಣದಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಒತ್ತುವರಿ ಮತ್ತು ಮಣ್ಣು ಹಾಕಿರುವ ಕಾರಣ ಸ್ಮಶಾನದಲ್ಲಿ ಗಿಡ ಗಂಟಿ ಬೆಳೆದು ನಿಂತ್ತು, ಜಾಗದ ಅಳೆತೆ ಸಿಗದ ಕಾರಣ ರೀ ಸರ್ವೆ ಮಾಡಿ ಜಾಗ ಗುರುತಿಸಿಕೊಡಿ ಎಂದು ಅರ್ಜಿ ಹಾಕಲಾಗಿದೆ. ರೀ ಸರ್ವೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೆಸರೇಳಿಚ್ಚಿಸದ ಯುವಕನೊಬ್ಬ ತಿಳಿಸಿದರು. ಜಿಲ್ಲಾಧಿಕಾರಿಗಳು ಕ್ವಾರಿಗೆ ಭೇಟಿ ನೀಡಿದ ಸಮಯದಲ್ಲಿ ಗ್ರಾಮದ ಯುವಕರು ಕ್ವಾರಿ ಹಾಗು ಟಿಪ್ಪರ್‍ನಿಂದಾಗುವ ತೊಂದರೆ ಹೇಳಿದ ಯುವಕನಿಗೆ ಲೀಸ್‍ದಾರರೊಬ್ಬರು ಹೆದರಿಸುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.