ಗುಂಡ್ಲುಪೇಟೆ: ತಾಲೂಕು ಹಾಗು ಜಿಲ್ಲೆಯಲ್ಲಿ ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಅವಕಾಶ ನೀಡಿ, ಅಕ್ರಮ ಗಣಿಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಜೊತೆಗೆ ಅಕ್ರಮ ಗಣಿಗಾರಿಗೆ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಡಬೂರು ಮಂಜುನಾಥ್ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಡಹಳ್ಳಿ ಗುಡ್ಡ ಕುಸಿತದ ನಂತರ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲೆಯಾದ್ಯಂತ ತಿಂಗಳ ಕಾಲ ಗಣಿಗಾರಿಕೆ ನಿಷೇಧಿಸುವಂತೆ ಸೂಚನೆ ನೀಡಿ, ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಗಣಿಗಾರಿಕೆ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಯೂ ಕೂಡ ನಡೆದಿದೆ. ಕೂಡಲೇ ಅದರ ಪಟ್ಟಿಯನ್ನು ಬಿಡುಗಡೆಗೊಳಿಸಿ, ಅಕ್ರಮ-ಸಕ್ರಮ ಗಣಿ ಮಾಲೀಕರ ಹೆಸರನ್ನು ಬಹಿರಂಗ ಪಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಅಧಿಕ ಮಂದಿ ಗಣಿ ಮಾಲೀಕರು ಅಕ್ರಮವಾಗಿ ಗಣಿಗಾರಿಕೆ ನಡೆಸುವ ಜೊತೆಗೆ ಕೋಟ್ಯಾಂತರ ರೂ. ರಾಜಧನ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಬಾಕಿ ಉಳಿಸಿಕೊಂಡಿರುವವರ ಹತ್ತಿರ ಹಣ ಪಾವತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹಲವು ಕಡೆ ಸರ್ಕಾರಿ ಗೋಮಾಳ ಹಾಗೂ ಬೆಟ್ಟ-ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ ಪುರಾತನ ಕಾಲದಿಂದಲೂ ಇರುವ ಗುಡ್ಡಗಳನ್ನು ಹಾಗೆ ಉಳಿಸಬೇಕು. ಇಂದು ನಡೆಯುತ್ತಿರುವ ಗಣಿಗಾರಿಕೆಗಳಿಂದ ಗೋಮಾಳಗಳು ಕಣ್ಮರೆಯಾಗುತ್ತಿವೆ. ದಲಿತ ಸ್ಮಶಾನಗಳು ಇಕ್ಕಟ್ಟಿಗೆ ಸಿಲುಕಿವೆ. ಧಾರ್ಮಿಕ ಭಾವನೆವುಳ್ಳ ಜೇನು ಗುಡ್ಡಗಳು ನಶಿಸುತ್ತಿವೆ. ಇವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ವರದಿ: ಬಸವರಾಜು ಎಸ್. ಹಂಗಳ