ಪಾಂಡವಪುರ: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಪಾಂಡವಪುರ ಘಟಕದ ಪದಾಧಿಕಾರಿಗಳಿಗೆ ೨೦೨೧-೨೨ನೇ ಸಾಲಿನ ಗುರುತಿನ ಚೀಟಿ (ಐಡೆಂಟಿಟಿ ಕಾರ್ಡ್) ವಿತರಿಸಲಾಯಿತು.
ಪಟ್ಟಣದ ನೇಸರ ರೆಸ್ಟೋರೆಂಟ್‌ನಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಎಲ್ಲಾ ಪದಾಧಿಕಾರಿಗಳಿಗೂ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ. ಕೊರೊನಾ ಎರಡನೇ ಅಲೆಯು ಎಲ್ಲೆಡೆ ವ್ಯಾಪಿಸುತ್ತಿದ್ದು, ಅನೇಕ ಜನರ ಸಾವು-ನೋವುಗಳು ಸಂಭವಿಸಿವೆ. ಕೊರೊನಾ ವಾರಿಯರ್ಸ್‌ಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊರೊನಾ ವಾರಿಯರ್ಸ್‌ಗಳಿಗೆ ನೆರವಾಗಬೇಕಿದೆ. ನಮ್ಮ ಸಂಘದ ವತಿಯಿಂದಲೂ ಶೀಘ್ರವೇ ಕೊರೊನಾ ವಾರಿಯರ್ಸ್‌ಗಳಿಗೆ ಆರೋಗ್ಯ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯ ಸರ್ಕಾರ ಪತ್ರಕರ್ತರನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಗುರುತಿಸಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಜೀವನ ಹಂಗನ್ನು ತೊರೆದು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಯಾವುದೇ ಸೌಲಭ್ಯ ಒದಗಿಸಿ ಕೊಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗದಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್, ಪದಾಧಿಕಾರಿಗಳಾದ ಅ.ರಾ.ಹರೀಶ್, ಮಹದೇವಪ್ಪ, ಹಾರೋಹಳ್ಳಿ ಧನ್ಯಕುಮಾರ್, ಚಿಕ್ಕಾಡೆ ಮದನ್, ಕೆ.ಎನ್.ರವೀಂದ್ರಕುಮಾರ್, ಪಾಂಡವಪುರ ಹರೀಶ್, ಜೈದೇವು ಇತರರಿದ್ದರು.