ಬೆಂಗಳೂರು: ಜಾಗತಿಕ ಮನ್ನಣೆಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕರ್ನಾಟಕ ಸಕಾರಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಎಂಬತ್ತಾರು ಹಾಸಿಗೆಗಳ ಮಾಡ್ಯುಲರ್ ಐ.ಸಿ.ಯು ಘಟಕದ ಕೊಡುಗೆ ನೀಡಿದೆ. ಇದನ್ನು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗುವುದು. ಇನ್ನು 3-4 ವಾರಗಳಲ್ಲಿ ಈ ಹೊಸ ಸೌಲಭ್ಯ ದೊರೆಯಲಿದೆ.
ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಹಿರಿಯ ಅಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾಹಿತಿ ನೀಡಿದೆ. ಈ ವೇಳೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು ಸರ್ಕಾರದೊಂದಿಗೆ ಖಾಸಗಿ ಉದ್ಯಮ ವಲಯವೂ ಕೈಜೋಡಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಉದ್ದೇಶ. ಆರೋಗ್ಯ ಮೂಲಸೌಕರ್ಯವನ್ನು ಇನ್ನೂ ವೇಗವಾಗಿ ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಕಂಪನಿಗಳು, ಕೈಗಾರಿಕಾ ವಲಯ ಸಿ.ಎಸ್.ಆರ್ ಅನುದಾನವನ್ನು ಬಳಸಿ ತಮಗೆ ಸಾಧ್ಯವಿರುವ ರೀತಿಯಲ್ಲಿ ಜನರಿಗೆ ನೆರವಾಗಬೇಕು ಎಂದರು.
ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಸಂತೋಷ್ ಕುಮಾರ್ ಮಾತನಾಡಿ 1985ರಲ್ಲಿ ಬೆಂಗಳೂರಿಗೆ ಬಂದ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಗೆ ಬೆಂಗಳೂರು ಮತ್ತು ಕರ್ನಾಟಕ ಮನೆಯಾಗಿದೆ. ರಾಜ್ಯ ಕೋವಿಡ್ ಸಾಂಕ್ರಾಮಿಕ ರೋಗ ಎದುರಿಸುತ್ತಿರುವಾಗ ನಮ್ಮ ಕಂಪನಿಯು ನೆರವಾಗಲು ಇದೊಂದು ಸಣ್ಣ ಪ್ರಯತ್ನ ಎಂದು ತಿಳಿಸಿದರು. ಈ ಅವಕಾಶವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನೀಲ್ ಕುಮಾರ್, ನಿಯೋಗದಲ್ಲಿ ಟಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ರಾಜೇಶ್ ಖುಷ್, ಕಾನೂನು ನಿರ್ದೇಶಕ (ಏಷ್ಯಾ)ಗೌರವ್ ಜಬುಲೀ, ಹಣಕಾಸು ಮತ್ತು ಕಾರ್ಯಾಚರಣೆ ನಿರ್ದೇಶಕ ಶೆತುಲ್ ಠಕ್ರಾರ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನೀಲ್ ಕುಮಾರ್ ಮತ್ತು ನೋಡಲ್ ಅಧಿಕಾರಿ ಡಾ. ಪಿ.ಎಸ್. ಹರ್ಷ ಉಪಸ್ಥಿತರಿದ್ದರು.