ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದಿಂದ ಬಿಟ್ಟು ಹೊರ ಹೋದ ನಾಯಕರನ್ನು ಮತ್ತೆ ಮಾತೃ ಪಕ್ಷಕ್ಕೆ ಕರೆಯುತ್ತಿದ್ದಾರೆ. ಇದು ಅವರ ಸೌಜನ್ಯತೆ ಮತ್ತು ಸಂಘಟನಾ ಚತುರತೆಯನ್ನು ತೋರಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊಗಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸದ್ಯದ ರಾಜ್ಯ ರಾಜಕೀಯವನ್ನು ಅವಲೋಕಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಸಂಘಟನೆಗೊಳಿಸುವ ಹಿನ್ನಲೆಯಲ್ಲಿ ಪಕ್ಷ ಬಿಟ್ಟು ಹೋದ ನಾಯಕರನ್ನು ಕರೆಯುತ್ತಿದ್ದಾರೆ ಅದು ಅವರ ಸೌಜನ್ಯವನ್ನು ತೋರಿಸುತ್ತದೆ ಎಂದರು.
ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ಬರಬಾರದೆಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರುವಾಗ ಎಲ್ಲ ಹಿರಿಯ ಕಾಂಗ್ರೆಸ್ ಮುಖಂಡರು ಹೀಗೆ ಹೇಳಿದ್ದರೇ ಎಂದು ಪ್ರಶ್ನಿಸಿದ ಅವರು ಇನ್ನಾದರೂ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಬಿಡಬೇಕು. ನಾಯಕರು ಪಕ್ಷ ಬಿಡುವುದು, ಸೇರುವುದು ಹೊಸತಲ್ಲ ಅದು ಎಲ್ಲ ಕಾಲದಲ್ಲಿ ನಡೆಯುತ್ತಿರುತ್ತದೆ.
ಜೆಡಿಎಸ್‌ನಿಂದ ಕಿತ್ತೆಸೆದಾಗ ಇದೇ ಡಿ.ಕೆ.ಶಿವಕುಮಾರ್, ನಾನು, ಎಸ್.ಎಂ.ಕೃಷ್ಣ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡೆವು. ಆಗ ಯಾರಾದ್ರೂ ಸಿದ್ದರಾಮಯ್ಯ ಬಂದ್ರೆ ಪ್ರಳಯ ಆಗುತ್ತೆ ಅಂದ್ರ ಎಂದು ತೀಕ್ಷ್ಣವಾಗಿ ಕೇಳಿದ ಅವರು ಇನ್ನಾದರೂ ಸಿದ್ದರಾಮಯ್ಯ ದ್ವೇಷ ಸಾಧನೆ ಮಾಡುವುದನ್ನು ಬಿಡಲಿ ಎಂದರು.
ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ ಎಂಬುದನ್ನು ಒಪ್ಪುತ್ತೇನೆ ಮತ್ತು ಅವರ ಸೌಜನ್ಯವನ್ನು ಮೆಚ್ಚುತ್ತೇನೆ. ಹಾಗೆಂದು ಅವರು ಕರೆದ ತಕ್ಷಣ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಆದ್ದರಿಂದ ನಾವು ಕಾಂಗ್ರೆಸ್ ಗೆ ಬಂದು ಬಿಡುತ್ತೇವೆಂಬ ಆತಂಕ ಸಿದ್ದರಾಮಯ್ಯಗೆ ಬೇಡ. ಆದರೆ ಡಿಕೆಶಿಯಂತೆ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕಾಗಿದೆ ಎಂದು ಹೇಳಿದರು.