ಮೈಸೂರು: ಮಂತ್ರವಾದಿಗಳು ನಿಜವಾದ ಭಯೋತ್ಪಾದಕರು ಎಂದು ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ 888ನೇ ಬಸವಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ 35ನೇ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನದಲ್ಲಿ ಬಸವಣ್ಣ ಮತ್ತು ವೈಚಾರಿಕತೆ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿ ಇಂದು ದೇಶದಲ್ಲಿ ಸಾಕಷ್ಟು ವಿದ್ಯಾವಂತರು, ಬುದ್ಧಿವಂತರು ಇದ್ದರೂ ಪ್ರಜ್ಞಾವಂತರ ಕೊರತೆಯಿಂದ ಕಪಟ ಮಂತ್ರವಾದಿಗಳು ಜನರನ್ನು ಶೋಷಣೆಗೆ ಒಳಪಡಿಸಿ ಬಸವಣ್ಣನವರ ದಯವೇ ಧರ್ಮದ ಮೂಲ ಎಂಬ ತತ್ವ ಉಪದೇಶಿಸುವ ಬದಲು ಭಯವೇ ಧರ್ಮದ ಮೂಲ ಎಂಬುದನ್ನು ಜನರ ಮನಸ್ಸಿನಲ್ಲಿ ತುಂಬಿ ಅವರ ಜೀವನವನ್ನು ನರಕಕ್ಕೆ ದೂಡುತ್ತಿದ್ದಾರೆ. ಅಂಗೈಯಲ್ಲಿ ಹಾಗೂ ನಾಲಿಗೆಯ ಮೇಲೆ ಕರ್ಪೂರ ಹಚ್ಚಿಕೊಳ್ಳುವುದು, ದೇವರು ಹಾಗೂ ದೆವ್ವ ಬರುತ್ತದೆ ಎಂದು ನಟಿಸುವುದು, ನೀರಿನಲ್ಲಿ ದೀಪ ಉರಿಸುವುದು, ತೆಂಗಿನಕಾಯಿ ಹಾಗೂ ಕಡ್ಡಿಯಿಂದ ಜಲ ಪರೀಕ್ಷೆ ಮಾಡುವುದು, ಕೈಯಲ್ಲಿರುವ ವಸ್ತು ಮಾಯ ಮಾಡುವುದು, ನಿಂಬೆಹಣ್ಣು ನೀರಿನಪಾತ್ರೆಯಿಂದ ಮಾಯವಾಗುವುದು ಮುಂತಾದ ಪ್ರಯೋಗಗಳನ್ನು ತಾವೇ ಸ್ವತಃ ಪ್ರಾಯೋಗಿಕವಾಗಿ ಮಾಡಿ ತೋರಿಸಿ ಜನರು ಇವುಗಳನ್ನು ಮಾಡಿತೋರಿಸುವ ಮಂತ್ರವಾದಿಗಳಿಂದ ಮೋಸ ಹೋಗದೆ ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡುವುದರ ಮುಖಾಂತರ ವೈಚಾರಿಕತೆಯನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಮಾತನಾಡಿ, ಅನೇಕರು ಹುಲಿಕಲ್ ನಟರಾಜ್‌ರವರು ತೀರಿಹೋಗಿದ್ದಾರೆ ಎಂದು ಸುಳ್ಳು ಸುದ್ಧಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದ್ದರು. ಅವರ ವೈಚಾರಿಕ ಚಿಂತನೆಯನ್ನು ಜನರಿಗೆ ತಿಳಿಸಿ ಮೌಢ್ಯತೆಗೆ ಒಳಗಾಗುತ್ತಿರುವ ಜನರಿಗೆ ಜಾಗೃತಿ ಉಂಟು ಮಾಡುವ ಸಲುವಾಗಿಯೇ ಅವರಿಂದಲೇ ಪ್ರವಚನ ಏರ್ಪಡಿಸಿ ವಿಕೃತ ಮನಸ್ಸುಗಳಿಗೆ ಉತ್ತರ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರಗೂರು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ, ಲಾಳನಹಳ್ಳಿ ಮಠದ ಜಯದೇವಿತಾಯಿ, ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಅಂತರ್ಜಾಲ ಸಂಚಾಲಕ ಪಿ.ವಿರುದ್ರೇಶ್, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಬೆಂಗಳೂರು ಜಿಲ್ಲಾಧ್ಯಕ್ಷ ಕಣ್ಣೂರು ಕುಮಾರಸ್ವಾಮಿ, ಸಂಸ್ಕೃತಿ ಚಿಂತಕ ತ್ರಿಪುರಾಂತಕ, ಪಂಚಾಕ್ಷರಿ ಉಪಸ್ಥಿತರಿದ್ದರು.

By admin