ಮೈಸೂರು, ಫೆ.೧೧- ನಗರದ ಖಾಸಾಗಿ ಹೋಟಲ್‌ನಲ್ಲಿ ೯ ದಿನಗಳ ಕಾಲ ನಡೆಯುವ ಸಿಲ್ಕ್ ಇಂಡಿಯಾ-೨೦೨೨ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಹಸ್ತಶಿಲ್ಪಿ ವತಿಯಿಂದ ಫೆ.೧೨ ರಿಂದ ೧೯ ರವರೆಗೆ ಹಮ್ಮಿಕೊಂಡಿರುವ ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸುನಂದ ಪಾಲನೇತ್ರ ವಿವಿಧ ರಾಜ್ಯಗಳ ಸುಮಾರು ೫೦ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಗಮನ ಸೆಳೆದವು. ಪ್ರತಿ ಮಳಿಗೆಗೆ ತೆರಳಿ ರೇಷ್ಮೆ ಸೀರೆಗಳನ್ನು ಅವುಗಳ ದರ, ಮಾರುಕಟ್ಟೆ, ವ್ಯಾಪಾರದ ಇತಿ-ಮಿತಿಗಳ ಮಾಹಿತಿ ಪಡೆದುಕೊಂಡರು.ಮೈಸೂರು ಹಸ್ತಶಿಲ್ಪಿ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ್ ಮಾತನಾಡಿ, ಮೇಳದಲ್ಲಿಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿವೆ. ವಿವಿಧ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರತಿದಿನ ಬೆಳಗ್ಗೆ ೧೦.೩೦ರಿಂದ ರಾತ್ರಿ ೮.೩೦ರವರೆಗೆ ಪ್ರದರ್ಶಿಸಿ, ಮಾರಾಟ ಮಾಡಲಾಗುತ್ತಿದೆ ಎಂದರು.
೪೮ ಮಳಿಗೆ: ಸಿಲ್ಕ್ ಇಂಡಿಯಾ-೨೦೨೨ ಮೇಳದಲ್ಲಿ ೪೮ ಮಳಿಗೆಗಳಿದ್ದು, ತಸ್ಸರ್ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡ್ ಸೀರೆ ಮತ್ತು ಡ್ರೆಸ್, ಬಲ್ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೆಟೀರಿಯಲ್ಸ್ಗಳು ಮತ್ತು ಸೀರೆಗಳು, ಬಾಗಲ್ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮುಲ್ಬಾರಿ ಸಿಲ್ಕ್, ಕಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪದರ್ಶನಗೊಳ್ಳಲಿದೆ. ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್ಗಳು ಮತ್ತು ಬೆಡ್ಶೀಟ್ಗಳು ಲಭ್ಯವಿವೆ. ಸಿಲ್ಕ್ ಇಂಡಿಯಾ ಮೇಳದ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ್ ಮತ್ತಿತರರು ಉಪಸ್ಥಿತರಿದ್ದರು.