ಕಾಲ ಬದಲಾದಂತೆಲ್ಲ ನಮ್ಮ ಬದುಕಿನಲ್ಲಿಯೂ ಬದಲಾವಣೆಗಳಾಗುತ್ತಿವೆ. ಅದರಲ್ಲೂ ಇವತ್ತಿನ ವೇಗದ ಬದುಕಿನಲ್ಲಿ ನಮ್ಮ ಜೀವನ ಕ್ರಮವೂ ಮೊದಲಿನಂತಿಲ್ಲ. ಹೀಗಾಗಿ ಸದಾ ಒತ್ತಡದ ನಡುವೆ ನಮ್ಮದೇ ಆದ ಖಾಸಗಿ ಬದುಕಿನ ಬಗ್ಗೆ ಗಮನನೀಡದೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ ಪರಿಣಾಮಗಳನ್ನು ಎದುರಿಸಲೇ ಬೇಕಾಗುತ್ತದೆ.

ಬದುಕಿನಲ್ಲಿ ಸದಾ ಬದಲಾವಣೆಯ ಘಟ್ಟಗಳಿವೆ. ಆಯಾಯ ಸಂದರ್ಭಗಳಲ್ಲಿ ಏನೇನು ನಡೆಯಬೇಕೋ ಅದನ್ನು ನಡೆಸಿಯೇ ತೀರಬೇಕಾಗುತ್ತದೆ. ಇಲ್ಲದೆ ಹೋದರೆ ಜೀವನಕ್ಕೊಂದು ಅರ್ಥವೇ ಇಲ್ಲದಾಗುತ್ತದೆ.

ಮನುಷ್ಯ ಜೀವನದಲ್ಲಿ ಮದುವೆಯಾಗಿ ಸಂಸಾರದ ಜೀವನಕ್ಕೆ ಕಾಲಿಡುವುದು ಒಂದು ಹೊಸ ಬದುಕು ಕಟ್ಟಿಕೊಂಡಂತೆಯೇ.. ಇಲ್ಲಿಂದಲೇ ಒಬ್ಬ ಪುರುಷ ಮತ್ತು ಮಹಿಳೆಯ ನಿಜವಾದ ಜವಬ್ದಾರಿಯುತ ಬದುಕು ಆರಂಭವಾಗುತ್ತದೆ. ಅದರಲ್ಲೂ ಮಹಿಳೆ ಗರ್ಭಿಣಿಯಾಗಿ ಮಗುವಿಗೆ ಜನ್ಮನೀಡಿ ಅದರ ಬೇಕು ಬೇಡಗಳನ್ನು ಅರಿತು ಸಾಕಿ ಸಲಹುದಿದೆಯಲ್ಲ ಅದು ಸುಲಭವಲ್ಲ. ಒಂದು ಮಗುವನ್ನು ಆರೋಗ್ಯಕರವಾಗಿ ಬೆಳೆಸುವುದು ಪೋಷಕರ ಕರ್ತವ್ಯವಾಗುತ್ತದೆ.

ಮೊದಲೆಲ್ಲ ಕೂಡು ಕುಟುಂಬಗಳಿದ್ದವು. ಅಲ್ಲಿ ಹಿರಿಯರು ಇರುತ್ತಿದ್ದರು. ಅವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ತಾಯಿಯಾದವರಿಗೆ ಅಷ್ಟೊಂದು ಕಷ್ಟಗಳು ಕಾಣಿಸುತ್ತಿರಲಿಲ್ಲ. ಈಗ ಸಂಸಾರ ಪುಟ್ಟದಾಗಿದೆ. ಗಂಡ, ಹೆಂಡತಿ ಇಬ್ಬರು ಸೇರಿ ಮಗುವನ್ನು ನೋಡಿಕೊಳ್ಳಬೇಕಾಗಿದೆ. ಅದರಲ್ಲೂ ಉದ್ಯೋಗಸ್ಥರಾದರಂತು ಮಗುವಿನ ಪಾಲನೆಗೆ ಮತ್ಯಾರನ್ನೋ ಅಥವಾ ಬೇಬಿ ಕೇರ್ ಸೆಂಟರ್‍ಗಳನ್ನು ಆಶ್ರಯಿಸಬೇಕಾಗುತ್ತದೆ.

ಮಗು ಹುಟ್ಟಿದ ಬಳಿಕ ಅದಕ್ಕೆ ಹೊತ್ತು ಹೊತ್ತಿಗೆ ಹಾಲು ಮತ್ತು ಆಹಾರ ನೀಡಿ ಸಲಹಬೇಕಾಗುತ್ತದೆ. ಮಗು ಆರೋಗ್ಯವಾಗಿರಬೇಕಾದರೆ ಅದರ ಲಾಲನೆ-ಪಾಲನೆಯು ಅಷ್ಟೇ ಮುಖ್ಯವಾಗಿರುತ್ತದೆ. ಮಗು ಹುಟ್ಟುವ ಮೊದಲೇ ಗರ್ಭಿಣಿ ಮಹಿಳೆಯರು ಮಗುವಿನ ಆರೈಕೆ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.

ಈಗಾಗಲೇ ಈ ಕುರಿತಂತೆ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಏನು ಮಾಡಬೇಕು? ಮಕ್ಕಳನ್ನು ಹೇಗೆ ಪೋಷಣೆ ಮಾಡಬೇಕು ಎಂಬುದರ ಕುರಿತಂತೆ ಸಮಗ್ರ ಮಾಹಿತಿಯನ್ನು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಯುತ್ತವೆ. ಇವು ತಾಯಂದಿರಿಗೆ ಉಪಯೋಗವಾಗುತ್ತಿದೆ.

ಇಷ್ಟಕ್ಕೂ ಮಗುವಿನ ತಾಯಿಗೆ ವೈದ್ಯರು ನೀಡುವ ಟಿಪ್ಸ್ ಏನೆಂದು ನೋಡುವುದಾದರೆ, ಹುಟ್ಟಿದ ಮಗುವಿಗೆ ಅರ್ಧ ಗಂಟೆಯೊಳಗೆ ಎದೆ ಹಾಲನ್ನು ನೀಡಬೇಕು. ಅಷ್ಟೇ ಅಲ್ಲದೆ ಆರು ತಿಂಗಳವರೆಗೆ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನೂ ನೀಡಬಾರದು. ಇನ್ನು ಸೀಸೆಗಳಲ್ಲಿ ಹಾಲನ್ನು ಕುಡಿಸಬಾರದು. ಮಗುವಿಗೆ ಆರು ತಿಂಗಳು ತುಂಬಿದ ಬಳಿಕ ದಿನಕ್ಕೆ ಕನಿಷ್ಠ ಆರು ಬಾರಿಯಾದರೂ ಪೂರಕ ಆಹಾರವಾಗಿ ರಾಗಿ, ಗೋಧಿ, ಅಕ್ಕಿ ಬೇಳೆಗಳಿಂದ ಅಂಬಲಿ ಮಾಡಿ ಕೊಡಬೇಕು.

ಆರರಿಂದ ಎಂಟು ತಿಂಗಳ ಅವಧಿಯಲ್ಲಿ ರಾಗಿ, ಸೆರಿ, ಬೇಯಿಸಿದ ತರಕಾರಿಗಳು, ದೋಸೆ, ಬೇಳೆಕಾಳುಗಳನ್ನು ನೀಡಬೇಕು. ಒಂಬತ್ತರಿಂದ ಹನ್ನೆರಡು ತಿಂಗಳವರೆಗೆ ಅನ್ನ, ರಾಗಿ ಅಂಬಲಿ, ಚಪಾತಿ, ಇಡ್ಲಿ, ದೋಸೆ, ಬೇಳೆಕಾಳು ಸೇರಿದಂತೆ ಇನ್ನಿತರ ಪದಾರ್ಥಗಳು ಹಾಗೂ ಒಂದು ವರ್ಷದ ನಂತರ ಎಲ್ಲ ರೀತಿಯ ಆಹಾರವನ್ನು ನೀಡಬಹುದಾಗಿದೆ.

ಇನ್ನು ಒಂದು ವರ್ಷ ತುಂಬಿದ ಮಗುವಿಗೆ ಎಲ್ಲ ರೀತಿಯ ಆಹಾರಗಳನ್ನು ದಿನಕ್ಕೆ ನಾಲ್ಕರಿಂದ ಎಂಟು ಬಾರಿ ಕೊಡಬಹುದಾಗಿದೆ. ಇಷ್ಟೇ ಅಲ್ಲದೆ ಮಗುವಿಗೆ ಅತಿಸಾರ ಬೇಧಿಯಾದಾಗ ಕೆಮ್ಮು ಮತ್ತು ಸಾಮಾನ್ಯ ಜ್ವರವಿದ್ದಾಗ ಮಗುವಿಗೆ ಆಹಾರದ ಪಥ್ಯ ಮಾಡದೆ ಮಾಮೂಲಿನಂತೆ ಆಹಾರ ನೀಡಬೇಕು. ಮಗುವಿನ ದೇಹಸ್ಥಿತಿಯಲ್ಲಿ ವ್ಯತ್ಯಾಸವಾದರೆ ಮಕ್ಕಳ ತಜ್ಞರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು.

ಮಕ್ಕಳಿಗೆ ಎದೆ ಹಾಲು ಕುಡಿಸುವುದರಿಂದ ತಾಯಿಯ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯೂ ಇದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಮಗುವಿಗೆ ಎದೆ ಹಾಲು ಕುಡಿಸುವುದರಿಂದ ತಾಯಿಯ ಬೊಜ್ಜು ಕರಗಿ ಸೌಂದರ್ಯ ವೃದ್ಧಿಸುತ್ತದೆ.

ಮಗುವನ್ನು ಸಾಂಕ್ರಾಮಿಕ ರೋಗಗಳಿಂದ ಕಾಪಾಡಲು ಮತ್ತು ಆರೋಗ್ಯವಂತ ಮಗುವಾಗಿ ಬೆಳೆಯಲು ಕಾಲ ಕಾಲಕ್ಕೆ ಚುಚ್ಚು ಮದ್ದು ಲಸಿಕೆಗಳನ್ನು ನೀಡಬೇಕಾಗುತ್ತದೆ. ಹುಟ್ಟಿನಿಂದ ಆರಂಭವಾಗಿ ಹನ್ನೆರಡು ವರ್ಷಗಳ ಕಾಲ ಯಾವ ಲಸಿಕೆಯನ್ನು ಹಾಕಿಸಬೇಕು ಎಂಬುದರ ಬಗ್ಗೆ ವೈದ್ಯರು ಪ್ರತಿಯೊಬ್ಬ ತಾಯಿಗೂ ಮಗುವಿನ ಆರೋಗ್ಯ ಮತ್ತು ಲಸಿಕೆಯ ಕಾರ್ಡನ್ನು ನೀಡುತ್ತಾರೆ. ಅದರಲ್ಲಿ ಎಲ್ಲ ರೀತಿಯ ಮಾಹಿತಿಗಳಿದ್ದು ಅದರಂತೆ ಆಯಾ ವಯಸ್ಸಿನಲ್ಲಿ ತಪ್ಪದೆ ಚುಚ್ಚು ಮದ್ದುಗಳನ್ನು ಹಾಕಿಕೊಂಡಿದ್ದೇ ಆದರೆ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

By admin