ಚಾಮರಾಜನಗರ: ಇತ್ತೀಚೆಗೆ ಸುರಿದ ಸತತಮಳೆ ಪರಿಣಾಮ ತಾಲೂಕಿನ ಹಂಡರಕಳ್ಳಿಮೋಳೆ ಗ್ರಾಮದ ನಿವಾಸಿ ಸಿದ್ದಶೆಟ್ಟಿ ಎಂಬವರ ಮನೆಗೋಡೆ ಕುಸಿತದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿನೀಡಿ, ಸಂತಸ್ತ್ರರಿಗೆ ವೈಯಕ್ತಿಕ ಪರಿಹಾರ ವಿತರಿಸಿದರು.
ಇದೇವೇಳೆ ಗ್ರಾಮಸ್ಥರು ತಮ್ಮ ಗ್ರಾಮದ ಬೀದಿಗಳಲ್ಲಿ ಸೂಕ್ತ ರಸ್ತೆ, ಚರಂಡಿಸೌಲಭ್ಯವಿಲ್ಲ. ಮನೆಬಳಕೆಯ ನೀರು ಬೀದಿಯಲ್ಲಿ ಹರಿಯುತ್ತಿದ್ದು, ಸಂಚರಿಸಲು ಸಮಸ್ಯೆಯಾಗಿದೆ. ಕೂಡಲೇ ಶಾಸಕರು ತಮ್ಮ ಬೀದಿಗಳಿಗೆ ಸೂಕ್ತ ರಸ್ತೆ,ಚರಂಡಿ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಶಾಸಕರು ಪ್ರತಿಕ್ರಿಯಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿವ ನೀರು, ವಸತಿ, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಇದೇವೇಳೆ ಶಾಸಕರು ವಿಶೇಷಅಭಿವೃದ್ಧಿ ಯೋಜನೆಯಡಿ ೧೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಶಾಲೆಗೆಭೇಟಿ; ಶಾಸಕರು ಇದೇವೇಳೆ ಹಂಡ್ರಕಳ್ಳಿ ಗ್ರಾಮದ ಉನ್ನತ್ತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿ, ಶಾಲೆಯ ಸ್ಥಿತಿಗತಿಗಳ ಕುರಿತು ಪರಿಶೀಲಿಸಿದರು.
ಈಗಿರುವ ಹಳೇಶಾಲಾಕೊಠಡಿ ಕೆಡವಿ, ಹೊಸಶಾಲೆಕೊಠಡಿ ನಿರ್ಮಾಣ ಮಾಡಿಕೊಡಬೇಕು, ಕಟ್ಟಡದ ಮೇಲ್ಛಾವಣಿ ದುರಸ್ತಿಪಡಿಸಿಕೊಡಬೇಕು, ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೂ ತಾವು ಕ್ರಮವಹಿಸಬೇಕು ಎಂದು ಶಾಲಾಮುಖ್ಯಶಿಕ್ಷಕಿ ರತ್ನಮ್ನ ಗ್ರಾಮಸ್ಥರ ಜತೆ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಸುಸನಕುಮಾರಿ, ಸದಸ್ಯರಾದ ಭುವನೇಶ್ವರಿ, ಸಿದ್ದರಾಜು, ಮುಖಂಡರಾದ ನಾಗರಾಜು, ನಿಂಗರಾಜು, ನಂಜುಂಡಯ್ಯ ಯಜಮಾನರು, ಗ್ರಾಮಸ್ಥರು ಹಾಜರಿದ್ದರು.