ಮೈಸೂರು: ಲಾಕ್ಡೌನ್ ಕೊನೆಗೊಳಿಸಿ ಹೋಟೆಲ್‌ ಗಳನ್ನು ಪೂರ್ಣಪ್ರಮಾಣದಲ್ಲಿ ನಡೆಸಲು ತಕ್ಷಣವೇ ಅವಕಾಶ ನೀಡಬೇಕು ಎಂದು ಹೋಟೆಲ್ ಉದ್ಯಮಿಯಾಗಿರುವ ಡಾ. ಶ್ವೇತಾ ಮಡಪ್ಪಾಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆಗಳಲ್ಲಿ ವಿನಾಯಿತಿ ನೀಡಬೇಕು. ಹೋಟೆಲ್ ಕಟ್ಟಡದ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಲಾಕ್ಡೌನ್ ಸಂದರ್ಭದಲ್ಲಿನ ವಿದ್ಯುತ್ ಶುಲ್ಕ ಹಾಗೂ ನೀರಿನ ಶುಲ್ಕದ ಮೇಲೆ ರೀಯಾಯಿತಿ ನೀಡಬೇಕು. ಹೋಟೆಲ್ ಕಾರ್ಮಿಕರಿಗಾಗಿ ಸರಕಾರ ಉಚಿತ ಆರೋಗ್ಯಸೇವೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹೋಟೆಲ್ ಕಾರ್ಮಿಕರಿಗಾಗಿ ಉಚಿತ ವಿಮಾ ಯೋಜನೆ ಜಾರಿಗೆ ತರಬೇಕು. ಮೈಸೂರಿನಲ್ಲೇ ಲಾಕ್ಡೌನ್ ನೆಪದಲ್ಲೇ ಬಹುಪಾಲು ಹೋಟೆಲ್‌ಗಳಿಗೆ ಪಾರ್ಸೆಲ್ ಸೇವೆಗೆ ಅವಕಾಶ ನೀಡಿ ನಗರದ ಪ್ರಮುಖ ಸ್ಥಳಗಳಲ್ಲಿರುವ ಪ್ರಭಾವಿ ಹೋಟೆಲ್‌ಗಳಿಗೆ ಮಾತ್ರ ಕಾರ್ ಸರ್ವಿಸ್, ಟೀ ಕಾಫಿ ಹಂಚಿಕೆಗೆ, ಸಂಪೂರ್ಣ ಅವಕಾಶ ನೀಡಿದ್ದಾರೆ. ಇಂಥ ಸಂದರ್ಭದಲ್ಲೂ ಈ ಅಸಮಾನತೆ ಏಕೆ? ಸ್ವತ: ಪೊಲೀಸರೇ ಇಲ್ಲಿ ಈ ಅವಧಿಯ ಗ್ರಾಹಕರೆನ್ನುವುದು ಆಶ್ಚರ್ಯ.

ಸಣ್ಣ-ಸಣ್ಣ ತಳ್ಳುಗಾಡಿಯವರ ಬದುಕಿನ ಯಾತನೆಯನ್ನು ಕೇಳುವವರೇ ಇಲ್ಲ. ಪ್ರವಾಸೋದ್ಯಮ ಮುಚ್ಚಿ ಹೋಗಿ ವಸತಿಗೃಹ(ಲಾಡ್ಜ್)ಗಳ ಮಾಲೀಕರ ಪರಿಸ್ಥಿತಿ ವಿವರಿಸಲು ಅಸಾಧ್ಯ. ಹೀಗಾಗಿ ಸಾಮಾಜಿಕವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮಗಳನ್ನು ಜಾರಿಗೆ ತಂದು ಮಾಸ್ಕ್, ಸಾಮಾಜಿಕ ಅಂತರ , ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಲು ಜನರಿಗೆ ಸೂಚಿಸಿ ಲಾಕ್ಡೌನ್ ಅನ್ನು ತೆರವುಗೊಳಿಸಿ ಹೋಟೆಲ್ ಉದ್ಯಮವು ಮತ್ತೆ ಮೊದಲಿನಂತೆ ಪೂರ್ಣಪ್ರಮಾಣದಲ್ಲಿ ನಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

By admin