ರಾಮ್‌ಗೋಪಾಲ್
೧೯೪೪ರಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಮಗೋಪಾಲ್ ಓರ್ವ ಬಿಸಿನೆಸ್‌ಮನ್. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಬೆಳಗಾವಿ ಸ್ನೇಹಿತರ ಮೂಲಕ ಅನಿರೀಕ್ಷಿತವಾಗಿ ೪.೧.೧೯೬೬ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದರ ನಿರ್ಮಾಪಕ ನೇಮಿನಾಥ ಮತ್ತು ನಿರ್ದೇಶಕ ಬಿ.ಟಿ.ಅಥಣಿ. ಬಹುತೇಕ ಮರಾಠಿ-ತೆಲುಗು-ಕನ್ನಡ ನಟನಟಿಯರ ಗುಂಪಲ್ಲಿದ್ದ ಕನ್ನಡ ಕಲಾವಿದರಲ್ಲಿ ರಾಮಗೋಪಾಲ್ ಕೂಡಒಬ್ಬರು. ಲಕ್ಷ್ಮಣ ಬೆರಳೇಕರ್ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಎಲ್ಲ ೭ ಹಾಡುಗಳನ್ನೂ ಬಾಲಿವುಡ್ ಗಾಯಕರಾದ ಲತಾಮಂಗೇಶ್ಕರ್ ಉಷಾಮಂಗೇಶ್ಕರ್ ಆಶಾಭೋಸ್ಲೆ ಹಾಗೂ ಮನ್ನಾಡೆ ಅವರುಗಳಿಂದಲೆ ಹಾಡಿಸಿದ್ದು ಚಂದನವನದ ನಿತ್ಯನೂತನ ದಾಖಲೆ. ಈ ಚಿತ್ರದ ಬಹುತೇಕ ತಾಂತ್ರಿಕ ಸಿಬ್ಬಂದಿ ಸಹ ಮುಂಬಯಿ ಚಿತ್ರರಂಗದವರೆ, ಹಲವಾರು ವಿಶೇಷತೆಯುಳ್ಳ ಈಚಿತ್ರದಲ್ಲಿ ನೃತ್ಯ-ಸಂಗೀತ-ಅಭಿನಯಗಳ ಖ್ಯಾತ ಕಲಾವಿದ ಅಭಿ ಭಟ್ಟಾಚಾರ್ಯ ಅತಿಥಿ ನಟನಾಗಿದ್ದುದು ಗಮನಾರ್ಹ ಅಂಶ!
ರಾಮಗೋಪಾಲ್ ಸ್ಫುರದೂಪಿ ಯುವಕ. ಅದೃಷ್ಟ ಕೈ ಕೊಡಲಾಗಿ ಬಯಸಿದಷ್ಟು ಚಿತ್ರಗಳಲ್ಲಿ ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಪ್ರತಿಭೆಗೆ ತಕ್ಕ ಪಾತ್ರ ದೊರಕಲಿಲ್ಲ. ಹಾಗಾಗಿ ಈತ ಕೇವಲ ೧೨ ಕನ್ನಡ ಚಿತ್ರಗಳಲ್ಲಿ ಮಾತ್ರ ಹೀರೋ ಆಗಿದ್ದರು. ಕೆಲವು ಮರಾಠಿ-ತೆಲುಗು ಚಿತ್ರದಲ್ಲಿಯೂ ಮುಖ್ಯಪಾತ್ರ ನಿರ್ವಹಿಸಿದ್ದುಂಟು? ಇಷ್ಟಾದರೂ ನಿರಾಶೆಗೊಳ್ಳದ ರಾಮಗೋಪಾಲ್ ದೊರೆತ ಅವಕಾಶಗಳನ್ನು ಸದುಪಯೋಗಿಸಿಕೊಂಡ ಪ್ರಾಮಾಣಿಕ. ನಿರ್ಮಾಪಕ-ನಿರ್ದೇಶಕರಿಗೆ ಯಾವ ತೊಂದರೆಯೂ ಆಗದಂತೆ ಚಿತ್ರದ ಷೆಡ್ಯುಲ್/ಶೂಟಿಂಗ್ ಮುಕ್ತಾಯದವರೆಗೆ ಎಲ್ಲರೊಡನೆ ಕಲೆತು ಸಹಕಾರ ನೀಡುತ್ತಿದ್ದರು. ಯಾರನ್ನೂ ನಿರಾಶೆಗೊಳಿಸದ ಈ ವಿಶ್ವಾಸಾರ್ಹ ಕಲಾವಿದ ಒಂದು ಫ಼ಿಲಂನಲ್ಲಿ ಮಾತ್ರ ಖಳನಟನಾಗಿಯೂ ೧೮ ಚಿತ್ರಗಳಲ್ಲಿ ಪೋಷಕ ನಟನಾಗಿಯೂ ಅಭಿನಯಿಸಿದ್ದರು.
ನವನಟಿ ಜಯಲಕ್ಷ್ಮಿ ಜತೆಗಿನ ಯುಗಳಗೀತೆ “ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೆ…..” ಮತ್ತು “ಜಾಣೆ ಜಾಗಾರ್ಧಹೆಣ್ಣೆ…..” ಚಿತ್ರಗೀತೆಗಳು ಇವತ್ತಿಗೂ ಅಮೋಘ ಅಪೂರ್ವ ಆಪ್ಯಾಯಮಾನ. ರಾಜನ್‌ನಾಗೇಂದ್ರ ಸಂಗೀತವಿದ್ದ ಬಿ.ಎ.ಅರಸುಕುಮಾರ್ ನಿರ್ದೇಶನದ ಬೀಸಿದಬಲೆ ಚಿತ್ರವು ಸಿಲ್ವರ್‌ಜ್ಯುಬ್ಲಿ ಪ್ರದರ್ಶನ ಕಂಡು ಇವರನ್ನು ಯಶಸ್ವಿ ನಾಯಕನಟರ ಸಾಲಿಗೆ ಕೊಂಡೊಯ್ಯಿತು! ಭಲೇರಾಣಿ ಮತ್ತು ತೀರದಬಯಕೆ ಚಿತ್ರಗಳು ೧೦೦ದಿನ ಪ್ರದರ್ಶನಗೊಂಡವು ಡಾ||ರಾಜ್ ನಟಿಸಿದ ಎರಡುಕನಸು ಫ಼ಿಲಂ ಸಿಲ್ವರ್‌ಜ್ಯುಬಿಲಿ ಕಂಡು ರಾಮಗೋಪಾಲ್‌ಗೆ ಪುನರ್ಜನ್ಮ ನೀಡಿತು. ತೆಲುಗು-ತಮಿಳು-ತುಳು-ಕೊಂಕಣಿ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಒಟ್ಟು ಸಿನಿಮಾ ಸಂಖ್ಯೆ ಕಡಿಮೆ ಎನಿಸಿದರೂ ೨೩ವರ್ಷ ಚಿತ್ರರಂಗದಲ್ಲಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಹಲವು ಪ್ರಶಸ್ತಿ ಬಹುಮಾನ ಪುರಸ್ಕಾರ ಲಭಿಸಿವೆ. ೨೦೧೫ರಲ್ಲಿ ಬೆಂಗಳೂರಲ್ಲಿ ನಿಧನರಾದ ನಟನನ್ನು ಚಂದನವನ ಎಂದಿಗೂ ಮರೆಯುವುದಿಲ್ಲ.
ರಾಮಗೋಪಾಲ್ ನಟಿಸಿದ ಫ಼ಿಲಂಸ್
