ಗುಂಡ್ಲುಪೇಟೆ: ಹಿರೀಕಾಟಿ ಸರ್ಕಾರಿ ಗೋಮಾಳದ ಸ.ನಂ.108ರಲ್ಲಿ ಅಕ್ರಮ ಗಣಿಗಾರಿಗೆ, ಒತ್ತುವರಿ, ರಾಜಧನ ಬಾಕಿ, ಮಡಹಳ್ಳಿ ಗುಡ್ಡಕ್ಕಿಂತ ಆಳ ಸೇರಿದಂತೆ ಇನ್ನಿತರ ಹಲವು ನಿಯಮ ಗಾಳಿಗೆ ತೂರಿದ್ದರು ಸಹ ಕ್ವಾರಿ ಮಾಲೀಕರು ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಮತ್ತೆ ಗಣಿಗಾರಿಗೆ ಪ್ರಾರಂಭಿಸಲು ಮುಂದಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಅಧಿಕಾರಿಗಳ ತಂಡ ಈ ಹಿಂದೆ ಕ್ವಾರಿಗಳಿಗೆ ಭೇಟಿ ನೀಡಿದ್ದ ವೇಳೆ ಹಿರೀಕಾಟಿ ಗ್ರಾಮಸ್ಥರು ಹಾಗು ಗ್ರಾಮದ ಯುವಕರು ಗಣಿಗಾರಿಕೆಯಿಂದ ಗ್ರಾಮಕ್ಕೆ ಆಗುತ್ತಿದ್ದ ಸಮಸ್ಯೆಗಳನ್ನು ತಿಳಿಸಿ, ಸಂಪೂರ್ಣವಾಗಿ ಗಣಿಗಾರಿಕೆ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಹೀಗಿದ್ದರೂ ಕೂಡ ಕ್ವಾರಿ ಮಾಲೀಕರು ಗಣಿಗಾರಿಗೆ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹಿರೀಕಾಟಿ ಕ್ವಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಕೋಟ್ಯಾಂತರ ರೂ. ರಾಜಧನ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಕ್ವಾರಿ ಮಾಲೀಕರಿಗೆ ಲೀಸ್ ಮಾಡಲು ಇಲಾಖೆ ಮುಂದಾಗಿದೆ. ಹಿರೀಕಾಟಿ ಕ್ವಾರಿಯ ಹಳೆಯ ಬಾಕಿ ಕಟ್ಟುವ ತನಕ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಲೀಸ್ ನೀಡದಂತೆ ಇಲಾಖೆ ಕ್ರಮ ತೆಗೆದುಕೊಳ್ಳುವ ಬದಲು ಲೀಸ್ ನೀಡಲು ಹೊರಟಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಇನ್ನು ಈ ಸಂಬಂಧ ಹಿರೀಕಾಟಿ ಕ್ವಾರಿ ಮಾಲೀಕರಿಗೆ ಪತ್ರಿಕೆಯಲ್ಲಿ ಹಾಗು ಜನರಿಂದ ದೂರು ಬರದಂತೆ ನೋಡಿಕೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ಧಾರೆ ಎಂದು ಅಧಿಕಾರಿಗಳ ವಲಯದಲ್ಲಿ ಮಾತು ಕೇಳಿ ಬಂದಿದೆ.

ಅಕ್ರಮ ಗಣಿಗಾರಿಕೆ ಅಧಿಕವಾಗಿ ನಡೆಸಿರುವ ಹಿನ್ನಲೆ ಹಿರೀಕಾಟಿ ಕ್ವಾರಿಯಲ್ಲಿ ಮಡಹಳ್ಳಿ ಗುಮ್ಮಕ್ಕಲ್ಲು ಗುಡ್ಡಕ್ಕಿಂತಲೂ ಹೆಚ್ಚಿನ ಆಳವಾಗಿದೆ ಹಾಗು ಲೀಸ್‍ಗಿಂತ ಹೆಚ್ಚು ಸ್ಥಳ ಒತ್ತುವರಿ ಮಾಡಿ ಗಣಿಗಾರಿಕೆ ನಡೆದಿದೆ ಎಂದು ತಪಾಸಣೆ ನಡೆಸಿದ ಅಧಿಕಾರಿಗಳು ವರದಿಯಲ್ಲಿ ಬರೆದಿದ್ದಾರೆ ಎನ್ನಲಾಗಿದ್ದು, ಜೊತೆಗೆ ದೇವಸ್ಥಾನ, ಸ್ಮಶಾನ ಹಾಗು ಹಿರೀಕಾಟಿಯಿಂದ ಕೃಷ್ಣಾಪುರ ಸಂಪರ್ಕ ರಸ್ತೆಯ ಬಳಿ ಗಣಿಗಾರಿಕೆ ನಡೆದಿದೆ ಹಾಗು ಅನುಮತಿ ನೀಡಿದ ಸ್ಥಳಕ್ಕಿಂತ ಹೆಚ್ಚು ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಹಿರೀಕಾಟಿ ಕ್ವಾರಿಯಲ್ಲಿ ಹತ್ತಾರು ಎಕರೆ ಲೀಸ್ ಪಡೆದು ಲೀಸ್ ಜಾಗಕ್ಕಿಂತ ಹೆಚ್ಚು ಜಾಗದಲ್ಲಿ ಕಲ್ಲು ತೆಗೆದು ರಾಜಧನ ವಂಚಿಸಿದ್ದಾರೆ ಹಾಗು ಹಾಲಿ ಲೀಸ್‍ನಲ್ಲೂ ಒತ್ತುವರಿಯಾಗಿದೆ ಹಾಗು ರಾಜಧನ ಕಟ್ಟದಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಹಿರೀಕಾಟಿ ಸರ್ಕಾರಿ ಗೋಮಾಳ ಸರ್ವೇ ನಂ-108ರಲ್ಲಿ ನಿಯಮ ಗಾಳಿಗೆ ತೂರಿ ಕ್ವಾರಿ ಮಾಲೀಕರು ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೊತೆಗೆ ಹಿರೀಕಾಟಿ ಗ್ರಾಮಸ್ಥರಿಗೆ ಗಣಿಗಾರಿಕೆಯಿಂದ ಹೆಚ್ಚಿನ ತೊಂದರೆಯಾಗುತ್ತಿದ್ದರೂ ಸಹ ಪುನಃ ಗಣಿಗಾರಿಕೆ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ. ಹಾಗೇನಾದರೂ ಮತ್ತೆ ಗಣಿಗಾರಿಕೆ ಆರಂಭವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಕೂಲಿ ಸಂಗ್ರಾಮ ಸಂಘಟನೆ ಜಿಲ್ಲಾಧ್ಯಕ್ಷ ಕಂದೇಗಾಲ ಶಿವಣ್ಣ ಎಚ್ಚರಿಕೆ ನೀಡಿದರು.

ವರದಿ: ಬಸವರಾಜು ಎಸ್.ಹಂಗಳ