ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಮಧ್ಯಾಹ್ನ ಬಿರು ಬಿಸಿಲಿನ ನಡುವೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬಿಸಿಲಿನ ಝಳ ನೆತ್ತಿ ಸುಡುತ್ತಿದ್ದರು, ದೇವಸ್ಥಾನದ ಆವರಣದಲ್ಲಿ ಸುತ್ತಲೂ ಹಾಕಿರುವ ಕಲ್ಲಿನ ಶಾಖ ಕಾಲಿಗೆ ತಗುಲಿ ನಿಲ್ಲಲಾಗದಿದ್ದರೂ ಸಹ ಭಕ್ತರು ಗೋಪಾಲ, ಗೋವಿಂದ ಗೋವಿಂದ ಎಂಬ ಘೋಷಣೆ ಕೂಗುತ್ತಾ ಸ್ವಾಮಿ ರಥವನ್ನು ಎಳೆಯುವುದಕ್ಕೆ ಉತ್ಸವ ಕುಂದಲಿಲ್ಲ.

ದೇವಾಲಯವನ್ನು ವಿವಿಧ ಹೂ ಮತ್ತು ಮುಸುಕಿನ ಜೋಳದಿಂದ ಅಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ರಥೋತ್ಸವಕ್ಕೆ ಜನರು ತಂಡೋಪತಂಡವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದು ಪೂಜೆ ಸಲ್ಲಿಸಿದರು. ಮಧ್ಯಾಹ್ನ 12:30 ಸಮಯದಲ್ಲಿ ರಥಕ್ಕೆ ದೇವರನ್ನು ಕೂರಿಸಿ ಪೂಜೆ ನಡೆಸಿ ಭಕ್ತರು ತೇರನ್ನು ಎಳೆದರು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟರು ಮತ್ತು ತಂಡ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯದ ಕಾರಣ ಈ ವರ್ಷ ಹೆಚ್ಚು ಭಕ್ತರು ಆಗಮಿಸಿದ್ದರು. ಪೆÇಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಿ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ದೇವಸ್ಥಾನದ ಕೆಳಗೆ ಭಕ್ತರು ಪಾನಕ ಮಜ್ಜಿಗೆಯನ್ನು ವಿತರಣೆ ಮಾಡಿದರು.

ಬೆಟ್ಟಕ್ಕೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ: ಭಕ್ತರು ತಮ್ಮ ವಾಹನಗಳನ್ನು ತಪ್ಪಲಿನಲ್ಲಿ ನಿಲ್ಲಿಸಿ ಕೆಎಸ್‍ಆರ್‍ಟಿಸಿ ಬಸ್ ಹೋಗಿ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ತಿರುವಿನಲ್ಲಿ ಬಸ್ ಹತ್ತದೆ ಅಪಘಾತ ಸಂಭವಿಸುತ್ತದೆ ಎಂಬ ಮುನ್ನೆಚ್ಚರಿಕೆಯಲ್ಲಿ ಕೆಎಸ್‍ಆರ್‍ಟಿಸಿ ತಾಂತ್ರಿಕ ಸಿಬ್ಬಂದಿಗಳು ಕಠಿಣವಾದ ತಿರುವಿನಲ್ಲಿ ಟೋಯಿಂಗ್ ವಾಹನದಲ್ಲಿ ಇದ್ದು ಚಾಲಕರಿಗೆ ಸೂಚನೆ ನೀಡುತ್ತಿದ್ದರು.

ಕಾಲ್ತುಳಿತ ಇಬ್ಬರಿಗೆ ಗಾಯ: ರಥವನ್ನು ಎಳೆಯುವ ಸಂದರ್ಭದಲ್ಲಿ ಇಬ್ಬರು ಯುವಕರು ಕಾಲ್ತುಳಿತಕ್ಕೆ ಸಿಲುಕಿ ಸಣ್ಣಪುಟ್ಟ ಗಾಯಗಳಾಯಿತು. ಒಂದು ಕ್ಷಣ ಮೈಮರೆತಿದ್ದರೆ ರಥದ ಚಕ್ರ ಹರಿಯುತ್ತಿತ್ತು. ಅಲ್ಲಿದ್ದ ಜನರು ಕ್ಷಣಾರ್ಧದಲ್ಲಿ ಗಾಯಾಳುವನ್ನು ಎಳೆದುಕೊಂಡರು. ತಕ್ಷಣ ಅಲ್ಲೆ ಇದ್ದ ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಆಂಬ್ಯುಲೆನ್ಸ್ ಸಹ ಕೆಟ್ಟು ನಿಂತಿತ್ತು. ಬಳಿಕ ಅರಣ್ಯ ಇಲಾಖೆಯ ವಾಹನದಲ್ಲಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಯಿತು.

ರಥೋತ್ಸವಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೆÇಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ತಹಸೀಲ್ದಾರ್ ರವಿಶಂಕರ್, ಪೆÇಲೀಸ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ ಪೆÇಲೀಸ್, ಅರಣ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು, ಜಾತ್ರೆ ಸುಗಮವಾಗಿ ನಡೆಯಲು ಸಹಕರಿಸಿದರು.

ವರದಿ: ಬಸವರಾಜು ಎಸ್.ಹಂಗಳ