ಗುಂಡ್ಲುಪೇಟೆ: ಹೈ ಕೋರ್ಟ್‍ನಲ್ಲಿ ಹಿಜಾಬ್ ಸಂಬಂಧ ಅಂತಿಮ ತೀರ್ಪು ಮಂಗಳವಾರವಿದ್ದ ಕಾರಣ ಪಟ್ಟಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಪಟ್ಟಣದ ಗೌತಮ್ ಪ್ರೌಢಶಾಲೆ, ಕೆ.ಎಸ್.ನಾಗರತ್ನಮ್ಮ ಕಾಲೇಜು, ಟಿಪ್ಪು ಸರ್ಕಲ್, ಮದೀನಾ ಹೋಟೆಲ್, ಜಾಕೀರ್ ಹುಸೇನ್ ನಗರ ಸೇರಿದಂತೆ ಇತರೆ ಜನ ನಿಬಿಡ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಪೊಲೀಸ್ ಪಡೆ ವಾಹನ, ಶಾಲೆಯ ಮುಂದೆ ಪೊಲೀಸರ ನಿಯೋಜನೆ, 112 ಗಸ್ತು ವಾಹನ ಸಂಚಾರ ವ್ಯವಸ್ಥೆ ಸೇರಿದಂತೆ ಒಟ್ಟು 10 ಮಂದಿ ಪೊಲೀಸರು ಹಾಗೂ ಶಸ್ತ್ರಾಸ್ತ್ರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಸಲಾಗಿತ್ತು.
ಪಟ್ಟಣದ ಗೌತಮ್ ಪ್ರೌಢಶಾಲೆಯಲ್ಲಿ ಈ ಹಿಂದೆ ಹಿಜಾಬ್ ವಿವಾದ ತಲೆದೊರಿದ ಕಾರಣ ತೀರ್ಪನ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ಶಾಲೆಯಲ್ಲಿ ನಿಯೋಜಿಲಾಗಿತ್ತು. ಕೆಲವು ಸ್ಥಳಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಈ ಕಾರಣದಿಂದ ಹೈ ಕೋರ್ಟ್ ತೀರ್ಪಿನ ನಂತರವೂ ಯಾವುದೇ ರೀತಿಯ ಅಹಿತಕರ ಘಟನೆಗಳು ತಾಲೂಕಿನಲ್ಲಿ ಜರುಗಲಿಲ್ಲ.
ವರದಿ: ಬಸವರಾಜು ಎಸ್.ಹಂಗಳ