ಚಾಮರಾಜನಗರ: ಜಿಲ್ಲೆಯಲ್ಲಿ ಏಪ್ರಿಲ್ ೧೮ರಿಂದ ೨೧ರವರೆಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಶಿಬಿರಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಮೇಳಕ್ಕೆ ಅನುಕೂಲವಾಗುವಂತೆ ಸಕಲ ಸಿದ್ದತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಭಾರತ ಸರ್ಕಾರವು ಐ.ಇ.ಸಿ ಕಾರ್ಯಕ್ರಮಗಳೊಂದಿಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಏರ್ಪಡಿಸುವಂತೆ ನಿರ್ದೇಶನ ನೀಡಿದೆ. ಅದರನ್ವಯ ಏಪ್ರಿಲ್ ೧೮ರಂದು ನಗರದ ಪೇಟೆ ಪ್ರೈಮರಿ ಶಾಲೆ, ಏಪ್ರಿಲ್ ೧೯ರಂದು ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ ೨೦ರಂದು ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆ, ಹಾಗೂ ಏಪ್ರಿಲ್ ೨೧ರಂದು ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕುವಾರು ಆರೋಗ್ಯ ಮೇಳ ಏರ್ಪಡಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಆರೋಗ್ಯ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರೋಗ್ಯ ಸಂಬಂಧಿತ ತಪಾಸಣೆಗೆ ಒಳಗಾಗಿ ಆಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಆರೋಗ್ಯ ಮೇಳದಲ್ಲಿ ಎಲ್ಲಾ ವಿಭಾಗಗಳಲ್ಲಿ ನುರಿತ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ಪ್ರಯೋಗ ಶಾಲಾ ಸೇವೆಗಳು, ಆಪ್ತ ಸಮಾಲೋಚನೆ, ಆಯುಷ್ ಸೇವೆಗಳು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ನೊಂದಣಿ, ಡಿಜಿಟಲ್ ಹೆಲ್ತ್ ಕಾರ್ಡ್ ನೊಂದಣಿ, ನೇತ್ರದಾನ, ಅಂಗಾಂಗ ದಾನ ನೊಂದಣಿ, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಕುರಿತು ಸಾರ್ವಜನಿಕರಿಗೆ ಸೇವೆ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರು ಆರೋಗ್ಯ ಶಿಬಿರದ ಅನುಕೂಲ ಪಡೆಯಲು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ನೆರವಾಗಬೇಕು ಎಂದು ತಿಳಿಸಿದರು.
ಮೇಳದ ಯಶಸ್ಸಿಗಾಗಿ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳಾದ ಕಂದಾಯ, ನಗರಾಬಿವೃದ್ಧಿ, ಆಯುಷ್, ಯುವಜನ ಸೇವೆ ಮತ್ತು ಕ್ರೀಡೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗಳು ತಮ್ಮ ಇಲಾಖೆಗಳಿಂದ ಅನುಷ್ಟಾನಗೊಳಿಸುತ್ತಿರುವ ವಿವಿಧ ಜನಪರ ಯೋಜನೆ, ಕಾರ್ಯಕ್ರಮಗಳ ಕುರಿತು ಮಳಿಗೆಗಳನ್ನು ತೆರೆಯಲಿವೆ. ಈ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಯೋಗ, ಧ್ಯಾನ, ಉತ್ತಮ ಜೀವನ ಶೈಲಿ, ಉತ್ತಮ ಆಹಾರ ಪದ್ದತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಆಯಾ ತಹಶೀಲ್ದಾರೊಂದಿಗೆ ಸಮನ್ವಯ ಸಾಧಿಸಿ ಆರೋಗ್ಯ ಮೇಳದ ಆಯೋಜನೆಗೆ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ, ಆರೋಗ್ಯ ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪ್ರತಿಯನ್ನು ತರಬೇಕು ಎಂದು ತಿಳಿಸಿದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ಆಯುಷ್ ಅಧಿಕಾರಿ ಡಾ. ಸುಜಾತ, ತಹಶೀಲ್ದಾರ್‌ರಾದ ಚಿದಾನಂದ ಗುರುಸ್ವಾಮಿ, ಜಯಪ್ರಕಾಶ್, ಮಂಜುಳ, ನಾಗರಾಜು, ಆನಂದ ಬಾಳಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ನಾಗಮಲ್ಲೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತ, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಸಭೆಯಲ್ಲಿ ಹಾಜರಿದ್ದರು.