ಹಾಸನ: ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಲು ಸಾಧ್ಯವಾಗದೆ  ಹತಾಶರಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ‌ಪಕ್ಷದ‌  ಬಗ್ಗೆ ‌ಇಲ್ಲ ಸಲ್ಲದ‌ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ‌ಮುಖಂಡ ಬಾಗೂರು ಮಂಜೇಗೌಡ ಹೇಳಿದ್ದಾರೆ.

ಸ್ವಪಕ್ಷ ಜೆಡಿಎಸ್‍ ನಲ್ಲಿರುವ ಬಿರುಕು ಸರಿಪಡಿಸಿಕೊಳ್ಳಲು‌ ಆಗದ ಅವರಿಗೆ ಕಾಂಗ್ರೆಸ್ ‌ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಸಿದ್ದರಾಮಯ್ಯ ‌ಅವರ   ಶಕ್ತಿ‌ ಏನೆಂಬುವುದು  ಕಾಂಗ್ರೆಸ್  ಕಾರ್ಯಕರ್ತರಿಗೆ ಗೊತ್ತಿದೆ. ಅದನ್ನು ರೇವಣ್ಣ ಅರ್ಥ  ಮಾಡಿಸುವ ಅಗತ್ಯವಿಲ್ಲ.‌ ಸುಖಾಸುಮ್ಮನೆ ಏನೇನೋ ಗೊಂದಲ  ಹೇಳಿಕೆ ‌ನೀಡುವ‌ ಮೂಲಕ  ಪ್ರಚಾರಗಿಟ್ಟಿಸಿಕೊಂಡು ರಾಜ್ಯಮಟ್ಟದಲ್ಲಿ ಜಿಲ್ಲೆಯ‌ ಶಾಸಕರ ಕೆಲಸ ಕಾರ್ಯಗಳು‌ ನಡೆಯದಂತೆ ಆಗಾಗ್ಗೆ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

‌ಮುಂದಿನ ಸಿಎಂ ಸಿದ್ದರಾಮಯ್ಯ  ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸವಾಲು ಹಾಕಿದ್ದಾರೆ. ಇಂತಹ ಹೇಳಿಕೆಗಳನ್ನು ‌ನೀಡಲು ರೇವಣ್ಣ ಅವರು ಕಾಂಗ್ರೆಸ್ ಪಾರ್ಟಿ ಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿರುವ ಮಂಜೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ರೇವಣ್ಣ ಅವರಿಂದ ‌ಸಲಹೆ ಸ್ವೀಕರಿಸುವ ಅಗತ್ಯವಿಲ್ಲ. ಇಂತಹ ಹೇಳಿಕೆಯಿಂದ ಮುಂದಿನ‌ ದಿನಗಳಲ್ಲಿ ಜೆಡಿಎಸ್ ಗೆ ಭವಿಷ್ಯ ‌ಇಲ್ಲ ಎಂಬುವುದನ್ನು ಇವರೇ ಸಾಕ್ಷೀಕರಿಸಿದ್ದಾರೆ  ಎಂದು ಲೇವಡಿ ಮಾಡಿದ್ದಾರೆ.

ರೇವಣ್ಣ ಅವರನ್ನು ಜೆಡಿಎಸ್ ಮೂಲೆ ಗುಂಪು ಮಾಡಿದೆ.ಅದಕ್ಕಾಗಿ ಕೆಲಸವಿಲ್ಲದೆ  ಕಾಂಗ್ರೆಸ್ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ‌ವಿಶಾಲವಾದ ಪಕ್ಷ ಇದರ ರಾಜಕೀಯ ‌ಚಟುವಟಿಕೆಗಳ‌ ಬಗ್ಗೆ ‌ಚರ್ಚಿಸಲು ಹೈಕಮಾಂಡ್ ಸಧೃಡವಾಗಿದೆ. ರೇವಣ್ಣ  ಅವರು ಕಾಂಗ್ರೆಸ್ ‌ಬಗ್ಗೆ‌‌  ಒಲವು ತೋರಿಸುತ್ತಿದ್ದಾರೆ. ಪಕ್ಷಕ್ಕೆ‌ ಬರುವುದಾದರೆ ಬಹಿರಂಗ ‌ಪಡಿಸಲಿ ಅದನ್ನು  ಸ್ವಾಗತಿಸುತ್ತೇವೆ. ಹಾಸನ‌ ಜಿಲ್ಲೆಗೆ‌ ಮುಖ್ಯ ಮಂತ್ರಿ‌ ಬಂದು ಹೋದ ಮೇಲೆ ಬಿಜೆಪಿ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು‌ ನಾಟಕೀಯ ಮಾತನಾಡುತ್ತಿದ್ದಾರೆ. ಜೆಡಿ ಎಸ್‌ ಹುಳುಕು ಮುಚ್ಚಿಕೊಳ್ಳಲು  ಸಲ್ಲದ ಹೇಳಿಕೆ‌ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By admin