ಹಾಸನ: ಕೋವಿಡ್ ಹೆಸರು ಹೇಳಿಕೊಂಡು ಸರ್ಕಾರ ಹಣ ಲೂಟಿ ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು ಸರ್ಕಾರ ಇನ್ನು 2 ವರ್ಷ ಮಾತ್ರ ಅಧಿಕಾರ ಇರಲಿದ್ದು, ಇರುವಷ್ಟು ದಿನ ಸಾಧ್ಯವಾದಷ್ಟು ಹಣ ಲೂಟಿ ಮಾಡಲು ಮುಂದಾಗಿದ್ದಾರೆ. ರಾಜ್ಯ ಲೂಟಿ ಕೋರರ ಕೈಲಿ ಸೇರಿದೆ, ಅದಕ್ಕೆ ಅಧಿಕಾರಿ ವರ್ಗವೂ ಕೈ ಜೋಡಿಸುತ್ತಿದೆ. ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದ್ದು, ಕೂಡಲೇ ವಿಧಾನ ಸಭೆ ಅಧಿವೇಶನ ಕರೆಯಲು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿಯೂ ಮದ್ಯ ಮಾರಾಟ ಒಂದರಲ್ಲಿಯೇ ರಾಜ್ಯ ಸರ್ಕಾರಕ್ಕೆ 2.5 ಸಾವಿರ ಕೋಟಿ ಲಾಭ ಬಂದಿದೆ. ಬೇರೆ ವಿವಿಧ ಮೂಲಗಳಿಂದಲೂ ಸರ್ಕಾರಕ್ಕೆ ಹಣ ಬಂದಿದೆ. ಒಂದು ಕಡೆ ಶಾಸಕ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಅನುಧಾನ ಕಡಿತ ಮಾಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನವನ್ನು ಶೇ. 50 ರಷ್ಟು ಕಡಿತ ಮಾಡಿರುವುದನ್ನು ಹಿಂಪಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಎ ಗ್ರೇಡ್ ಪಂಚಾಯಿತಿಗೆ ವಾರ್ಷಿಕ 13 ಲಕ್ಷ ರೂ. ಬರುತಿತ್ತು ಅದನ್ನು ಕಡಿತ ಮಾಡಿ ಈಗ ಕೇವಲ 6 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಒಂದು ಪಂಚಾಯಿತಿಯಲ್ಲಿ ಕನಿಷ್ಟ 15 ಜನ ಸದಸ್ಯರಿದ್ದರೆ ಈ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹೇಗೆ ಸಾಧ್ಯ. ಅನುದಾನ ಕಡಿತ ಮಾಡುವ ಮೂಲಕ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದ್ದು, ಕೇಂದ್ರ ಸರ್ಕಾರ ನೀಡಿದ ಹಣದಲ್ಲಿಯೂ ಲೂಟಿ ನಡೆಯುತ್ತಿದೆ. ನರೇಂದ್ರ ಮೋದಿ ಅವರು ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ, ಅಚ್ಚೇ ದಿನ್ ಬರಲಿದೆ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವುದು ಏನು ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಬರುವ ಮುನ್ನವೇ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳಿಗೆ ಕಾಯದೇ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸಬೇಕು. ಅಗತ್ಯ ಸಿಬ್ಬಂದಿ, ವೈದ್ಯರನ್ನು ನೇಮಿಸಬೇಕು. ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

By admin