ಗುಂಡ್ಲುಪೇಟೆ: ಸುಮಾರು 20 ವರ್ಷಗಳಿಂದ ಕ್ಷೌರಿಕಾ ವೃತ್ತಿ ಮಾಡುತ್ತಿದ್ದ ಕ್ಷೌರಿಕ ಈ ಬಾರಿ ಹರವೇ ಗ್ರಾಮ ಪಂಚಾಯಿತಿಯ 1ನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಗೆದ್ದ ನಂತರವೂ ಅದೇ ವೃತ್ತಿ ಮುಂದುವರೆಸಿದ್ದಾರೆ.
ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೇ ಗ್ರಾಮದ ಮಹೇಶ್(ಮೊಯಿಲಿ) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸಿ ಗ್ರಾಪಂ ಸದಸ್ಯರಾಗಿದ್ದಾರೆ. ಈತ 2ನೇ ತರಗತಿ ವ್ಯಾಸಂಗ ಮಾಡಿದ್ದು, ಗ್ರಾಮದ ಜನರ ಜೊತೆ ನಿಕಟ ಸಂಪರ್ಕ, ಸೌಜನ್ಯ, ಅನ್ಯೋನ್ನತೆ ಹೊಂದಿದ ಕಾರಣ ಗ್ರಾಮದ ಮತದಾರರು ಈತನಿಗೆ ಬೆಂಬಲ ನೀಡಿದ್ದಾರೆ.
ಮಹೇಶ್(ಮೊಯಿಲಿ) ತಂದೆ ಮುದ್ದ ಈಗಲೂ ಕೂಡ ಗ್ರಾಮದ ಮನೆ ಮನೆಗಳಿಗೆ ತೆರಳಿ ವೃದ್ಧರು, ಚಿಕ್ಕ ಮಕ್ಕಳು ಸೇರಿದಂತೆ ಅನೇಕರಿಗೆ ಕ್ಷೌರ ಮಾಡುತ್ತಾರೆ. ಇವರ ಈ ಸೌಜನ್ಯ ನಡವಳಿಕೆಯಿಂದ ಮತದಾರರು ಈ ಬಾರಿ ಮಹೇಶ್‍ಗೆ ಮತ ನೀಡಿದ್ದಾರೆ ಎಂದು ಸ್ಥಳೀಯರಾದ ಗಿರೀಶ್ ತಿಳಿಸಿದರು.
ವರದಿ: ಬಸವರಾಜು ಎಸ್ ಹಂಗಳ