ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ ೧೩ ರಿಂದ ೧೫ರವರೆಗೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹರ್ ಘರ್ ತಿರಂಗಾ ಅಭಿಯಾನದ ಸಿದ್ದತೆ ಕುರಿತು ಸಭೆ ನಡೆಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆಗಸ್ಟ್ ೧೩ ರಿಂದ ೧೫ರವರೆಗೆ ಮನೆ ಮನೆಗಳಲ್ಲಿ, ಎಲ್ಲಾ ಸರ್ಕಾರಿ ಕಚೇರಿ, ಕಟ್ಟಡಗಳು, ಕೈಗಾರಿಕೆ, ಅಂಗಡಿ, ವಾಣಿಜ್ಯ ಸಂಕಿರ್ಣಗಳಲ್ಲಿ, ವಸತಿ ಸಮುಚ್ಚಯ ಕಟ್ಟಡಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ತ್ರಿವರ್ಣ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣಕ್ಕೆ ಜನತೆ ಸಹಕರಿಸಬೇಕು ಎಂದರು.
ಮಾರ್ಗಸೂಚಿಯನ್ವಯ ಸರ್ಕಾರಿ ಕಚೇರಿಗಳಲ್ಲಿ ಆಗಸ್ಟ್ ೧೩ ರಿಂದ ೧೫ರವರೆಗೆ ಮೂರು ದಿನಗಳಂದು ಪ್ರತಿದಿನ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ ಇಳಿಸಬೇಕು. ಮನೆ ಮನೆಗಳಲ್ಲಿ ಆಗಸ್ಟ್ ೧೩ರಂದು ಧ್ವಜಾರೋಹಣ ನೆರವೇರಿಸಿ ಆಗಸ್ಟ್ ೧೫ರವರೆಗೂ ಇರಿಸಬಹುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶಪ್ರೇಮ ಅಭಿವ್ಯಕ್ತಪಡಿಸಬೇಕು. ಹೋರಾಟ, ತ್ಯಾಗದಿಂದ ಬಂದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳೊಂದಿಗೆ ಹರ್ ಘರ್ ತಿರಂಗಾ ಅಭಿಯಾನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಸಂಬಂಧ ಕೈಗೊಂಡಿರುವ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಬೇಕು. ಧ್ವಜಗಳ ವಿತರಣೆ, ಧ್ವಜಸಂಹಿತೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಹರ್ ಘರ್ ತಿರಂಗಾ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ದೇಶಾಭಿಮಾನ, ರಾಷ್ಟ್ರ ಪ್ರೇಮ ಮೂಡಿಸುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಯೋಜನೆಯಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಹರ್ ಘರ್ ತಿರಂಗಾ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯಶಸ್ವಿಯಾಗಿ ನಿರ್ವಹಿಸಬೇಕು. ಧ್ವಜ ಸಂಹಿತೆ ಬಗ್ಗೆ ತಿಳಿವಳಿಕೆ ನೀಡಬೇಕು. ವೈವಿದ್ಯಮಯ ಕಾರ್ಯಕ್ರಮಗಳ ಆಯೋಜನೆ, ಪೂರ್ವಭಾವಿಯಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವ್ಯಾಪಕವಾಗಿ ತಿಳಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ನಾಗಮಲ್ಲೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಜಯಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಬೀವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
