
ಚಾಮರಾಜನಗರ: ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ ೧೩ರಿಂದ ೧೫ರವರೆಗೆ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ ಇಂದು ನಗರದ ವಿವಿಧೆಡೆ ನಡೆಯಿತು.
ಚಾಮರಾಜನಗರ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಜಾಥಾಗೆ ನಗರಸಭೆ ಅಧ್ಯಕ್ಷರಾದ ಆಶಾನಟರಾಜು ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು. ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದರು.
ಹರ್ ಘರ್ ತಿರಂಗಾ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರು, ಅಧಿಕಾರಿಗಳು, ನೌಕರರು, ಪೌರಕಾರ್ಮಿಕರು ಸೇರಿದಂತೆ ಎಲ್ಲರೂ ಭಾರತ ತ್ರಿವರ್ಣ ಧ್ವಜ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ದೇಶಪ್ರೇಮ ಅಭಿಮಾನ ಮೆರೆದರು.
ಇದೇ ವೇಳೆ ನಗರಸಭಾ ಅಧ್ಯಕ್ಷರಾದ ಅಶಾನಟರಾಜು ಅವರು ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಸ್ವಚ್ಚತಾ ಸೇವಾ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ನಗರಸಭೆ ಸದಸ್ಯರಾದ ಶಿವರಾಜು, ಗಾಯತ್ರಿಚಂದ್ರಶೇಖರ್, ನೀಲಮ್ಮ, ಚಿನ್ನಮ್ಮ, ಭಾಗ್ಯಮ್ಮ, ಮಮತ, ಅಬ್ರಾರ್ ಖಲೀಲ್, ಮಹೇಶ್, ಪ್ರಭಾರ ಪೌರಾಯುಕ್ತರಾದ ನಟರಾಜು, ಕಂದಾಯ ಅಧಿಕಾರಿ ಶರವಣ, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ, ಸಮುದಾಯ ಸಂಘಟನಾಧಿಕಾರಿ ವೆಂಕಟ್‌ನಾಯಕ್, ಕಿರಿಯ ಅಭಿಯಂತತರಾದ ಆರಾಧ್ಯ, ದೇವರಾಜು, ನಗರಸಭೆಯ ನೀರು ಸರಬರಾಜು ನೌಕರರು, ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಹರ್ ಘರ್ ತಿರಂಗಾ ಅಭಿಯಾನ ಜಾಥಾ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ ೧೩ರಿಂದ ೧೫ರವರೆಗೆ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನದವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜು, ಡಿ.ವೈ.ಎಸ್.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ತ್ರಿವರ್ಣ ಧ್ವಜ ಪ್ರದರ್ಶಿಸಿ ಜಾಥಾಗೆ ಚಾಲನೆ ನೀಡಿದರು.
ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿದ ಜಾಥಾದಲ್ಲಿ ಅರಣ್ಯ, ಅಗ್ನಿಶಾಮಕ, ಅಬಕಾರಿ ಹಾಗೂ ಗೃಹರಕ್ಷಕ ದಳದ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು. ಪೊಲೀಸ್ ಬ್ಯಾಂಡ್ ತಂಡ ಸಹ ಭಾಗವಹಿಸಿತ್ತು. ದೊಡ್ಡಂಗಡಿ ಬೀದಿ, ರಥದಬೀದಿ, ಪಚ್ಚಪ್ಪ ವೃತ್ತದ ಮೂಲಕ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಾಥಾ ಮುಕ್ತಾಯವಾಯಿತು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
