ಆಂಜನೇಯ ಹನುಮಜಯಂತಿ
ಅಂಜನಾ ವಾಯುಪುತ್ರ ಆಂಜನೇಯ
ನೀನಿಲ್ಲದ ಲೋಕವದು ಎಲ್ಲಿಹುದಯ್ಯಾ
ಹರ್ಷಕ್ಕೊಮ್ಮೆ ಬಂದರೂ ವಾರ್ಷಿಕೋತ್ಸವ
ವರ್ಷಪೂರ್ತಿ ಇರುವುದು ಆರಾಧನೋತ್ಸವ
ನಿನ್ನನು ಸ್ಮರಿಸಿ ಪೂಜಿಸದಾ ದಿನಗಳಿಲ್ಲ
ನಿನಗೆ ಮಣಿದು ವಂದಿಸದಾ ಮನುಜರಿಲ್ಲ
ಧರ್ಮಾತೀತ ದೇಶಾತೀತ ನಿನ್ನ ಮಹಿಮೆ
ಪ್ರಶ್ನಾತೀತ ಜಾತ್ಯಾತೀತ ನಿನ್ನ ಹಿರಿಮೆ
ಭೇದಭಾವ ರಹಿತ ಭಜನೆ ಗಗನಾದ್ಯಂತ
ಜಯವಿಜಯ ದುಂದುಭಿ ಮೊಳಗಿಸಿತು
ಶಕ್ತಿಭಕ್ತಿ ಸಹಿತ ಪ್ರಾರ್ಥನೆ ವಿಶ್ವದಾದ್ಯಂತ
ಸಾಗರದಾಳ ಪರ್ವತದೆತ್ತರ ತಲುಪಿತು
ನಿನ್ನ ಬಾಲ್ಯ ಯೌವ್ವನ ವೃದ್ಧಾಪ್ಯ ಶೌರ್ಯ
ಅಮೋಘ ಅಪೂರ್ವ ಅದ್ಭುತ ಆಶ್ಚರ್ಯ
ನಿನ್ನ ರೋಮರೋಮವೂ ಶ್ರೀರಾಮನಾಮ
ಅಪರೂಪ ಅನುರೂಪ ವಾನರ ಜನುಮ
ಅನಂತ ಆಧ್ಯಾತ್ಮಿಕ ಆಪ್ಯಾಯಮಾನ
ಆಚಂದ್ರಾರ್ಕ ಆಂಜನೇಯ ಚಿರಂಜೀವ
ವರಪ್ರಧಾನ ಕೃಪಾಕರುಣೆ ಸತ್ಯಶ್ರೇಷ್ಠತ
ಸಕಲಲೋಕ ಸರ್ವಕಾಲಿಕ ನಿತ್ಯಪೂಜಿತ
ನೆನೆದಾಗ ನಿನ್ನನ್ನು ಹನುಮ
ಪಾವನ ನಮ್ಮದು ಜನುಮ
ಭಜಿಸಲು ನಿನ್ನಯ ನಾಮ
ಭಯ-ಭೀತಿ-ಶತ್ರು ನಿರ್ನಾಮ
ಆಂಜನೇಯ ಹನುಮನ ಜಯಂತ್ಯುತ್ಸವ
ವಿಶ್ವದೆಲ್ಲೆಡೆ ಸ್ಥಾಪಿಸಲಿ ಶಾಂತಿನೆಮ್ಮದಿ ಭಾವ

÷÷÷÷÷÷÷÷÷÷÷÷÷÷÷÷÷÷
ಕುಮಾರಕವಿ ಬೋ.ನಾ.ನಟರಾಜ
9036976471, ಬೆಂಗಳೂರು