ಸಕಲೇಶಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಕೃಷಿ ಮಾರುಕಟ್ಟೆ ಕಾನೂನು ಮಾರ್ಪಾಡು ರೈತರ ಪಾಲಿಗೆ ಮರಣ ಶಾಸನ ಎಂದು ಆರೋಪಿಸಿದ ಆಲೂರು- ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಎಪಿಎಂಸಿ ಹಳೆ ಕಾನೂನು ಜಾರಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು ದೇಶದ ಬೆನ್ನೆಲುಬಾಗಿರುವ ರೈತರು ತಾವು ಬೆಳೆದ ಬೆಳೆಗಳನ್ನು ಕೃಷಿ ಮಾರುಕಟ್ಟೆಗೆ ಮಾರಾಟ ಮಾಡಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದು. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂದ ಹೊಸ ಕಾನೂನಿನಲ್ಲಿ ಖಾಸಗಿ ವಲಯ ಹಾಗೂ ಬಂಡವಾಳಶಾಹಿ ಪರವಾಗಿದೆ ಎಂದರು.
ಇದರ ವಿರುದ್ದ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೂ ಇವರ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೌರವ, ಮನ್ನಣೆ ನೀಡದೆ ರೈತರನ್ನು ಕಡೆಗಣಿಸಿ ಖಾಸಗಿಯವರಿಗೆ ರತ್ನಗಂಬಳಿ ಹಾಕಿದೆ. ಸರ್ಕಾರ ಕೂಡಲೇ ಹೊಸ ಕಾನೂನನ್ನು ರದ್ದುಪಡಿಸಿ ಈ ಹಿಂದೆ ಇದ್ದಂತಹ ಹಳೇ ಕಾನೂನನ್ನೇ ಜಾರಿ ಮಾಡಬೇಕೆಂದು ಆಗ್ರಹಿಸಿದರು.