ಮೈಸೂರು: ಮಹಾಮಾರಿ ಕೊರೋನಾ ಸೋಂಕು ಇದೀಗ ಗ್ರಾಮೀಣ ಪ್ರದೇಶವನ್ನು ಇನ್ನಿಲ್ಲದಂತೆ ಕಾಡಲು ಆರಂಭಿಸಿದೆ. ಕಳೆದ ಬಾರಿ ಗ್ರಾಮಗಳನ್ನು ಸೀಲ್ ಡೌನ್ ಮಾಡುವ ಮೂಲಕ ನಿಯಂತ್ರಣ ಮಾಡಲಾಗಿತ್ತಾದರೂ ಈ ಬಾರಿ ಸೀಲ್ ಡೌನ್ ಮಾಡದ ಕಾರಣದಿಂದಾಗಿ ತೀವ್ರತೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪಟ್ಟಣದಿಂದ ಗ್ರಾಮೀಣ ಪ್ರದೇಶಗಳತ್ತ ಜನ ಮುಖ ಮಾಡಿದ್ದರಿಂದ ಕೆಲವು ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಜನರಲ್ಲಿ ಭಯ ಹುಟ್ಟಿಸಿದ್ದು, ಕೆಲವರು ಗ್ರಾಮಗಳ ಸೀಲ್ ಡೌನ್ ಮಾಡುವಂತೆ ಒತ್ತಾಯ ಮಾಡಲಾರಂಭಿಸಿದ್ದಾರೆ. ಮೊದಲ ಅಲೆಯನ್ನು ನಿಭಾಯಿಸಿದ ರೀತಿಯನ್ನೇ ಮುಂದುವರೆಸಿದ್ದರೆ ಎರಡನೇ ಅಲೆಯ ತೀವ್ರತೆ ಈ ಮಟ್ಟಕ್ಕೆ ಹೆಚ್ಚಾಗುತ್ತಿರಲಿಲ್ಲವೇನೋ? ಆದರೆ ಒಂದಷ್ಟು ನಿರ್ಲಕ್ಷ್ಯಗಳು ಮತ್ತು ಪಟ್ಟಣದಲ್ಲಿ ಬದುಕು ಕಂಡು ಕೊಂಡಿದ್ದ ಜನ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ತಮ್ಮ ಹಳ್ಳಿಗಳಿಗೆ ಹಿಂತಿರುಗಿರುವುದು ಈಗ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಸದ್ಯ ಹಳ್ಳಿಗಳಲ್ಲಿಯೂ ಸೋಂಕು ಹೆಚ್ಚಾಗುತ್ತಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚುತ್ತಿರುವ ಸೋಂಕಿಗೆ ತಡೆ ಹಾಕಬೇಕಾದರೆ ಗ್ರಾಮಗಳ ಸೀಲ್ ಡೌನ್ ಅನಿವಾರ್ಯ ಎಂಬ ಸಲಹೆಗಳು ಕೇಳಿ ಬರುತ್ತಿವೆ. ಇವತ್ತಿನ ಪರಿಸ್ಥಿತಿಯಲ್ಲಿ ಸೀಲ್ ಡೌನ್ ಮಾಡಿದರೆ ಬಡವರ ಬದುಕು ಮೂರಾಬಟ್ಟೆಯಾಗುವುದರಲ್ಲಿ ಎರಡು ಮಾತಿಲ್ಲ. ಕಳೆದ ಬಾರಿ ಬಹಳಷ್ಟು ದಾನಿಗಳು ಬಡವರ ಸಂಕಷ್ಟಕ್ಕೆ ಮಿಡಿದಿದ್ದರು. ಆದರೆ ಈ ಬಾರಿ ಕೊರೋನಾದ ಹೊಡೆತ ಎಲ್ಲ ವರ್ಗಕ್ಕೂ ತಟ್ಟಿದೆ. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೊಂದಷ್ಟು ಮಂದಿಯ ವೇತನ ಕಡಿತವಾಗಿದೆ. ತಮ್ಮ ದುಡಿಮೆಯ ನಂಬಿ ಮಾಡಿಕೊಂಡ ಸಾಲವನ್ನು ತೀರಿಸಲಾಗದ ಸ್ಥಿತಿ ಬಹಳಷ್ಟು ಮಂದಿಯದ್ದಾಗಿದೆ.
ಇಂತಹ ಪರಿಸ್ಥಿತಿಯಲ್ಲಿಯೂ ಏರುತ್ತಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕುವ ಸಲುವಾಗಿ ನಂಜನಗೂಡು ತಾಲೂಕಿನ ಹದಿನಾರು ಗ್ರಾಮವನ್ನು ಹತ್ತುದಿನಗಳ ಕಾಲ ಸೀಲ್ ಡೌನ್ ಮಾಡಲು ಜನ ಮುಂದಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ತೀರ್ಮಾನ ಕೈಗೊಂಡಿದೆ.
ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ಹದಿನಾರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಹಸಿಲ್ದಾರ್ ಮೋಹನ್ ಕುಮಾರಿ, ಇಓ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಭಿ, ಆರೋಗ್ಯ ಇಲಾಖೆಯ ಅಧಿಕಾರಿ ಡಿಎಚ್‌ಓ ಈಶ್ವರ, ಆರೋಗ್ಯ ಇಲಾಖೆಯ ಅಧಿಕಾರಿ ನಾಗೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಉಪಸ್ಥಿತರಿದ್ದ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಗ್ರಾಮವನ್ನು ಸಂಪೂರ್ಣವಾಗಿ ಹತ್ತುದಿನಗಳ ಕಾಲ ಸೀಲ್ ಡೌನ್ ಮಾಡಿ ಗ್ರಾಮದಿಂದ ಹೊರಗಡೆ ಯಾರೂ ಹೋಗೋ ಹಾಗಿಲ್ಲ. ಹೊರಗಡೆಯಿಂದ ಗ್ರಾಮಕ್ಕೆ ಯಾರು ಕೂಡ ಬರುವ ಹಾಗಿಲ್ಲ ಆ ರೀತಿ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ತಾಲೂಕು ಆಡಳಿತ ಆರೋಗ್ಯ ಇಲಾಖೆ ಒಟ್ಟಿಗೆ ಸೇರಿ ಕ್ರಮವನ್ನು ಕೈಗೊಂಡಿರುವುದಾಗಿ ತಹಸಿಲ್ದಾರ್ ಮೋಹನ್ ಕುಮಾರಿ ತಿಳಿಸಿದ್ದಾರೆ.
ಹತ್ತು ದಿನಗಳ ಕಾಲ ಕಟ್ಟುನಿಟ್ಟಾಗಿ ಗ್ರಾಮದ ಜನರ ಹಿತದೃಷ್ಟಿಯಿಂದ ಈ ಸೀಲ್ ಡೌನ್ ಮಾಡಲಾಗಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕೆಂದು ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದ್ದಾರೆ.