ಚಾಮರಾಜನಗರ: ವಚನಗಳ ಮೂಲಕ ತಳ ಸಮುದಾಯದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದ ಹಡಪದ ಅಪ್ಪಣ್ಣನವರು ವಚನ ಚಳವಳಿಗೆ ಶಕ್ತಿ ತುಂಬಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ಅನುಭವ ಮಂಟಪದ ಶಿವಶರಣರಲ್ಲಿ ಪ್ರಮುಖರಾಗಿದ್ದಾರೆ. ಜಗಜ್ಯೋತಿ ಬಸವಣ್ಣನವರ ಅಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರು ೨೦೦ ವಚನಗಳನ್ನು ರಚಿಸುವ ಮೂಲಕ ತಳ ಸಮುದಾಯವನ್ನು ಬಡಿದೆಚ್ಚರಿಸುವ ಕೆಲಸ ಮಾಡಿದ್ದಾರೆ. ವಚನ ಚಳವಳಿ ಮೂಲಕ ಬಸವಣ್ಣನವರ ಯಶಸ್ಸಿನ ಹಿಂದಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ೧೨ನೇ ಶತಮಾನ ಶರಣರ, ಸಂತರ ಶತಮಾನವಾಗಿದೆ. ತುಳಿತಕ್ಕೊಳಗಾಗಿದ್ದ ಸಮಾಜಗಳ ಸಮಾನತೆ ಬಯಸಿದ್ದ ಹಡಪದ ಅಪ್ಪಣ್ಣನವರು ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ತಾರತಮ್ಯ, ಮೌಢ್ಯಗಳನ್ನು ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚೆನ್ನಬಸವಸ್ವಾಮಿಜೀಯವರು ಆಶೀರ್ವಚನ ನೀಡಿ ಮಾತನಾಡಿ ೧೨ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾಲಘಟ್ಟವಾಗಿದೆ. ಶಿವಶರಣರು ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಬೆಳಕು ಚೆಲ್ಲಿ ಜನರನ್ನು ಕತ್ತಿಲಿನಿಂದ ಬೆಳಕಿನಡೆಗೆ ನಡೆಸಿದರು. ಇಂದಿಗೂ ಸಹ ವಚನಗಳ ತತ್ವ ಆದರ್ಶಗಳು ಜನಮಾನಸದಲ್ಲಿ ಅಚ್ಚಳಿಯದಸ್ಥಾನ ಪಡೆದಿವೆ. ವಚನಗಳ ಸಾರವನ್ನು ಎಲ್ಲರೂ ಅರಿಯಬೇಕು. ಸದೃಢ ಸಮಾಜ ಕಟ್ಟಲು ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು ಎಂದರು.
ಅರಕಲವಾಡಿ ನಾಗೇಂದ್ರ ಅವರು ಮುಖ್ಯ ಭಾಷಣ ಮಾಡಿ ದೇಶದ ಚರಿತ್ರೆಯಲ್ಲಿ ವಚನ ಚಳವಳಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ. ಸಮಯಪ್ರಜ್ಞೆ, ನಂಬಿಕೆ, ನಿಷ್ಠೆಗೆ ಇನ್ನೊಂದು ಹೆಸರೇ ಹಡಪದ ಅಪ್ಪಣ್ಣನವರು. ಶಿವಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರಲ್ಲಿ ಪ್ರಮುಖರಾದ ಹಡಪದ ಅಪ್ಪಣ್ಣನವರು ಬಸವಣ್ಣನವರ ನಿಜ ಚೈತನ್ಯವಾಗಿದ್ದರು. ತಳ ಸಮುದಾಯದವರ ಮುಖದರ್ಶನ ಅಪಶಕುನವೆಂದು ತಿಳಿದಿದ್ದ ಅಂದಿನ ದಿನಗಳಲ್ಲಿ ಬಸವಣ್ಣನವರು ಬೆಳಿಗ್ಗೆಎದ್ದ ಕೂಡಲೇ ಹಡಪದ ಅಪ್ಪಣ್ಣನವರ ಮುಖ ನೋಡಿ ಮೌಢ್ಯತೆ, ಕಂದಾಚಾರಗಳಿಗೆ ಸೆಡ್ಡು ಹೊಡೆದಿದ್ದರು ಎಂದು ತಿಳಿಸಿದರು.
ಇಂದು ಅನೇಕ ಜಾತಿ, ಧರ್ಮಗಳಿಂದ ಒಡೆದು ಛಿದ್ರಛಿದ್ರವಾಗಿರುವ ಭಾರತದಲ್ಲಿ ನಾವೆಲ್ಲರೂ ಒಂದುಗೂಡಲು ವಚನ ಚಳವಳಿಯತ್ತ ಮುಖ ಮಾಡಬೇಕಿದೆ. ಹಡಪದ ಸಮುದಾಯದ ಜನರು ಮುಖ್ಯವಾಹಿನಿಗೆ ಬರಲು ಸಾಮಾಜಿಕ ಚಿಂತನೆಯಲ್ಲಿ ತೊಡಗಬೇಕು. ಉತ್ತಮ ಶಿಕ್ಷಣ ಪಡೆದು ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಮುನ್ನೆಲೆಗೆ ಬರಬೇಕು. ಆಗಮಾತ್ರ ಹಡಪದ ಅಪ್ಪಣ್ಣನವರಿಗೆ ಗೌರವ ಸಲ್ಲಿಸಿದಂತಾಗಲಿದೆ. ಸಮುದಾಯವು ಅಭಿವೃದ್ಧಿ ಕಾಣಲಿದೆ ಎಂದು ಅರಕಲವಾಡಿ ನಾಗೇಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಚಿನ್ನಸ್ವಾಮಿ, ತಾಲೂಕು ಅಧ್ಯಕ್ಷರಾದ ಸೋಮಣ್ಣ, ಕೃಷ್ಣಪ್ಪ, ಶ್ರೀಕಂಠಸ್ವಾಮಿ, ಮಹದೇವು, ಬಸವಣ್ಣ, ಇತರೆ ಮುಖಂಡರು ಸಮುದಾಯದ ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ತಿಮ್ಮರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನೋದ, ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ದೀಪ, ಮುಖಂಡರಾದ ಜಿ.ಎಂ. ಗಾಡ್ಕರ್, ಇತರರು ಕಾರ್ಯಕ್ರಮದಕಲ್ಲಿ ಹಾಜರಿದ್ದರು.