• ಚಿದ್ರೂಪ ಅಂತಃಕರಣ

ನಾನು ಕನ್ನಡ ಸ್ನಾತಕೋತ್ತರ ಎಂ. ಎ ವಿದ್ಯಾರ್ಥಿಯಾಗಿದ್ದಾಗ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ‌ ಕಾವ್ಯ ಮೀಮಾಂಸೆ ಮೊದಲಾದ ಕೃತಿಗಳನ್ನು ಪಠ್ಯವಿಷಯ ನಿಯೋಜಿತ ಕಾರ್ಯಗಳ ನಿಟ್ಟಿನಲ್ಲಿ ಕಣ್ಣಾಡಿಸಿದ್ದು ಮಾತ್ರ ಬಿಟ್ಟರೆ ಅವರ ಬಗ್ಗೆ ಖುದ್ದಾಗಿ ಹೆಚ್ಚೇನು ತಿಳಿದುಕೊಳ್ಳದ ದೌರ್ಭಾಗ್ಯನಾಗಿದ್ದೆ. ಆದರೆ ಮಾತೃ ಸ್ವರೂಪಿಣಿ ಶ್ರೀಮತಿ ಕಮಲಮ್ಮ ಅವರ ದೆಸೆಯಿಂದ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಹಿರಿಯ ಪುತ್ರಿ ಡಾ. ಎಚ್. ಟಿ ಶೈಲಜ ಅವರ ಪರಿಚಯವಾಗಿ ಬಯಲ ಬೆಳಗು ಮತ್ತು ಸಾಹಿತ್ಯಾವಲೋಕನ ಡಾ. ಎಚ್ .ತಿಪ್ಪೇರುದ್ರಸ್ವಾಮಿ ೮೫ ಮತ್ತು ೯೫ರ ನೆನಪಿನ ಸಂಪುಟ ಎಂಬ ಎರಡು ಪುಸ್ತಕಗಳು ನನ್ನ ಕೈಸೇರಿದವು. ಈ ಮೂಲಕ ನನಗೆ ತಿಪ್ಪೇರುದ್ರಸ್ವಾಮಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಭಾಗ್ಯದ ಬಾಗಿಲು ತೆರೆಯಿತು.


ಮಾನವ ವಿಕಾಸದಲ್ಲಿ ಸಾಹಿತ್ಯ ಕ್ಷೇತ್ರವು ಆಧ್ಯಾತ್ಮಿಕ, ಧಾರ್ಮಿಕ, ಕಲೆ ಮತ್ತು ಇತರೆ ಕ್ಷೇತ್ರಗಳ ರೀತಿಯಲ್ಲಿ ಪ್ರಾಮುಖ್ಯತೆ ಹೊಂದಿದೆ. ಈ ವಿಚಾರವಾಗಿ ಎಚ್‌. ತಿಪ್ಪೇರುದ್ರಸ್ವಾಮಿ ಅವರು ಕೈಗೊಂಡ ಸಾಹಿತ್ಯ ಕ್ಷೇತ್ರದ ಮಹತ್ಕಾರ್ಯ, ಭವಿಷ್ಯದ ದೇಶದ ಅಭ್ಯುದಯವೇ ಸರಿ. ಅದರಲ್ಲೂ ವಚನ ಕಾಲದ ಹೆಗಲಾಗಿ ಸಕಾಲ ಮತ್ತು ಸರ್ವಕಾಲದಲ್ಲೂ ನಿಲ್ಲುವ ಧೀಮಂತ ಸಾಹಿತ್ಯ ಸರಳ ಕಾಯಕ ಜೀವಿಯಾಗಿ ಕನ್ನಡ ನಾಡಿಗೆ ತಿಪ್ಪೆರುದ್ರಸ್ವಾಮಿ ಅವರು ದೊರಕಿರುವುದು ನಾಡಿನ ಹೆಮ್ಮೆ. ಇವರ ಶ್ರಮದ ನೆರಳಲ್ಲಿ ಸಂಸ್ಕೃತಿ ಮತ್ತು ಸಮುದಾಯವು ಪೋಷಿಸಿಕೊಳ್ಳುವ ಬಗೆಯಲ್ಲಿ ನಾವೆಲ್ಲರೂ ಫಲಾನುಭವಿಗಳು‌. ಸಂಸ್ಕೃತಿವೈದ್ಯರಾದ ತಿಪ್ಪೇರುದ್ರಸ್ವಾಮಿ ಅವರಿಗೆ ನಮ್ಮಿಂದಾಗಬಹುದಾದ ಕೃತಜ್ಞತೆ ಎಂದರೆ ಅವರು ರಚಿಸಿದ, ಸಂಶೋಧಿಸಿದ ಸಾಹಿತ್ಯದ ಮಟ್ಟನ್ನು ಅನ್ವಯಿಕ ನಡೆಯಲ್ಲಿ ಪೀಳಿಗೆಗೆ ವರ್ಗಾಯಿಸುವುದಾಗಿದೆ‌. ಜತೆಗೆ ಮುಂದುವರೆದು ಅವರ ಸಾಹಿತ್ಯದ ಹೆದ್ದಾರಿಗಳಲ್ಲಿ ಕವಲೊಡೆದು ಒಂದೇ ಮರದ ಕೊಂಬೆಗಳ ಹಸಿರೆಲೆ ಹೂಗಳಾಗಿ – ಕಾಯಿ ಹಣ್ಣುಗಳಾಗಿ ಬೆಳೆದು ಪರೋಪಕಾರಿಯಾಗುವುದಾಗಿದೆ.


ಬಯಲ ಬೆಳಗು ಮತ್ತು ಸಾಹಿತ್ಯಾವಲೋಕನ ಪುಸ್ತಕಗಳು ಸಿದ್ಧಗಂಗಾ ಶ್ರೀಕ್ಷೇತ್ರದ ಪರಮಪೂಜ್ಯ ನಿರಂಜನ ಪ್ರಣವ ಸ್ವರೂಪಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು, ಸುತ್ತೂರು ಶ್ರೀಕ್ಷೇತ್ರದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಹಿರೇಕಲ್ಮಠ, ಹೊನ್ನಾಳಿ ಶ್ರೀಕ್ಷೇತ್ರದ ಪರಮಪೂಜ್ಯ ಷಟ್ ಸ್ಥಲಬ್ರಹ್ಮ ಶ್ರೀ ಶ್ರೀ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಅವರುಗಳ ಮಹಾಪೋಷಣೆ ಮತ್ತು ಆಶೀರ್ವಾದದೊಂದಿಗೆ ಇದೇ ತಿಂಗಳ ೨೨ನೆಯ ತಾರೀಖಿನಂದು ಲೋಕಾರ್ಪಣೆಗೊಳ್ಳುತ್ತಿವೆ. ಈ ಅಭಿನಂದನಾ ಕೃತಿಗಳ ಸಂಪಾದಿತ ಗೌರವಾಧ್ಯಕ್ಷರಾಗಿ ಡಾ. ಎಂ. ಚಿದಾನಂದಮೂರ್ತಿಯವರು, ಸಂಪಾದಕರಾಗಿ ಮತ್ತು ಸಂಚಾಲಕರಾಗಿ ಡಾ. ಎಚ್. ಟಿ ಶೈಲಜ, ಪ್ರೊ. ಮಲೆಯೂರು ಗುರುಸ್ವಾಮಿ, ಡಾ. ಬಿ. ನಂಜುಂಡಸ್ವಾಮಿ, ಡಾ. ಬಿ. ಪ್ರಭುಸ್ವಾಮಿ ಕಟ್ನವಾಡಿ, ಡಾ. ಬಿ. ಎಸ್ ಸುದೀಪ್ ಅವರುಗಳು ಜವಾಬ್ದಾರಿ ಹೊತ್ತಿದ್ದಾರೆ. ಗೌರವಾನ್ವಿತ ಸದಸ್ಯರಾಗಿ ಡಾ. ಎನ್. ಬಸವಾರಾಧ್ಯ, ಪ್ರೊ. ಜಿ. ಎಸ್ ಸಿದ್ಧಲಿಂಗಯ್ಯ, ಡಾ. ಎಂ. ಎಂ ಕಲಬುರ್ಗಿ, ಶ್ರೀ ಗೊ.ರು. ಚನ್ನಬಸಪ್ಪ, ಡಾ ಸಾ. ಶಿ ಮರುಳಯ್ಯ, ಪ. ಮಲ್ಲೇಶ್ ಹೀಗೆ ಮತ್ತಲವರು ಈ ಪುಸ್ತಕಗಳ‌ ಸದಸ್ಯಸ್ಥಾನದಲ್ಲಿದ್ದಾರೆ.


ಈ ಅಭಿನಂದನಾ ಪುಸ್ತಕಗಳ ತಯಾರಿಗೆ ೨೦೧೨ರಲ್ಲೇ ಯೋಜಿಸಲಾಗಿ ಅವರ ಗುರುಬಳಗ, ಸಹೋದ್ಯೋಗಿ ಬಳಗ, ಶಿಷ್ಯಬಳಗ, ಅಭಿಮಾನಿ ಬಳಗ ಅಧಿಕವಾಗಿದ್ದು ಎಲ್ಲಾ ಕಡೆಯಿಂದಲೂ ಸಾಹಿತ್ಯಿಕ ಮಾಹಿತಿಯನ್ನು ಕಲೆಹಾಕಿ ಒಂದು ರೂಪಕ್ಕೆ ತರಲು ಒಂದು ದಶಕವೇ ಹಿಡಿದು ಈ ಪ್ರಸಕ್ತ ವರ್ಷವಾದ ೨೦೨೩ರಲ್ಲಿ ಹೊರತರಲಾಗುತ್ತಿದೆ. ವಿಷಾದವೆಂದರೆ ಈ ಪುಸ್ತಕಗಳ ಆರಂಭದ ರೂಪುರೇಷೆಯಲ್ಲಿ ಕೈ ಜೋಡಿಸಿದ ಕೆಲ ವಿದ್ವಾಂಸ ಮಹನೀಯರು, ಲೇಖಕರು, ಹಿರಿಯರು ದೈವಾಧೀನರಾಗಿದ್ದಾರೆ.


ಬಯಲ ಬೆಳಗು ಗ್ರಂಥವು ಮೂರು ಭಾಗಗಳನ್ನು ಒಳಗೊಂಡಿದ್ದು; ಭಾಗ ಒಂದರಲ್ಲಿ (೫೨) ಪೂಜ್ಯರ ಆಶೀರ್ವಚನವಿದೆ. ಭಾಗ ಎರಡರಲ್ಲಿ (೩೭೫) ಗುರು ಹಿರಿಯರು, ವಿದ್ವಾಂಸರು, ಸಹೋದ್ಯೋಗಿಗಳು, ಶಿಷ್ಯರು, ಅಭಿಮಾನಿಗಳು ತಿಪ್ಪೇರುದ್ರಸ್ವಾಮಿ ಅವರನ್ನು ಈ ಬಗೆಯಾಗಿ; ಸಾಹಿತಿಗಳ ಮೊದಲ ಶ್ರೇಣಿಯವರು- ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ, ನನ್ನ ಚಿದ್ವಲಯದವರು – ಕುವೆಂಪು, ಅಗ್ರ ಶಿಷ್ಯ – ಪ್ರೊ. ಸ. ಸ ಮಾಳವಾಡ, ಕನ್ನಡದ ಕಟ್ಟಾ ಅಭಿಮಾನಿಗಳು – ಗೊರೂರು ರಾಮಸ್ವಾಮಿ ಅಯ್ಯಂಗಾರ್, ಒಂದು ಅಪೂರ್ವ ಚೇತನ – ಪ್ರೊ ಎಸ್. ವಿ ಪರಮೇಶ್ವರಭಟ್ಟ, ಶತಾಯುರ್ಭವ – ರಂಗನಾಥ ದಿವಾಕರ, ಕನ್ನಡ ಸಾಹಿತ್ಯದ ಶಿವಯೋಗಿಗಳು – ಎಸ್ ಎಂ. ವೀರಭದ್ರಯ್ಯ ಬಸವಸುತ, ಅನುಭಾವದ ಅರಸ – ಪೂಜ್ಯ ಶ್ರೀ ಮಹಾಂತೇಶಶಾಸ್ತ್ರಿಗಳು, ಶರಣ ಸಾಹಿತ್ಯದ ಪ್ರವರ್ಧಕರು – ಮಾರ್ಕಂಡಪುರಂ ಶ್ರೀನಿವಾಸ, ಶೂನ್ಯದಲ್ಲಿ ಪೂರ್ಣವನ್ನು ತುಂಬುತ್ತಿದ್ದವರು – ಡಾ. ಕೆ ಚಿದಾನಂದ ಗೌಡ ಮತ್ತಿತ್ತಾಗಿ ಬರೆದಿರುವ ಅನೇಕರ ಬರೆವಣಿಗೆಗಳನ್ನು ಕಲೆಹಾಕಲಾಗಿದೆ. ಭಾಗ ಮೂರರಲ್ಲಿ ನೆನಪಿನ ಬುತ್ತಿ – ಡಾ. ಎಚ್ ತಿಪ್ಪೇರುದ್ರಸ್ವಾಮಿ, ಬದುಕಿನ ಹೆಜ್ಜೆಗಳು, ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ ಯೋಜನೆ ಎಂಬುದರ ಜತೆಗೆ ಇನ್ನೂ ನಾಲ್ಕು ಅನುಬಂಧ ವಿಷಯಗಳನ್ನು ಸೇರಿಸಲಾಗಿದೆ‌.


ಸಾಹಿತ್ಯಾವಲೋಕನ ಗ್ರಂಥವು ಮೂರು ಭಾಗಗಳನ್ನು ಒಳಗೊಂಡಿದ್ದು,; ಭಾಗ ಒಂದರಲ್ಲಿ ತಿಪ್ಪೇರುದ್ರಸ್ವಾಮಿ ಅವರ ವ್ಯಕ್ತಿತ್ವ ಕುರಿತಾಗಿ ಬಂಧುಗಳು ಕಂಡಂತೆ, ಕವಿಗಳು ಕಂಡಂತೆ ಎಂಬುದಾಗಿ ತಿಪ್ಪೇರುದ್ರಸ್ವಾಮಿ ಅವರೊಂದಿಗಿನ ಬಂಧುಗಳ, ಕವಿಮಿತ್ರರ ಒಡನಾಟದ ಲೇಖನಗಳು ಈ ಬಗೆಯಾಗಿ ಬಂದಿವೆ. ನೆನಪಿನ ಗಣಿಯಲ್ಲಿ ನನ್ನ ಪತಿ – ಶ್ರೀಮತಿ ಗೌರಮ್ಮ ಡಾ. ಎಚ್ ತಿಪ್ಪೇರುದ್ರಸ್ವಾಮಿ, ನನ್ನ ಅಣ್ಣ – ಎಚ್. ಎಂ ಅನ್ನಪೂರ್ಣ, ಅಜ್ಜನ ನೆನಪುಗಳು – ಬಿ. ಎಸ್ ಅರುಣ್, ಜೀವ ಭಾವ ದೇವಕಣ – ಚೆನ್ನವೀರ ಕಣವಿ, ರಸ ರುದ್ರ ಚಿದ್ರೂಪ – ಪ್ರೊ. ಕಿರಣ್ ರವೀಂದ್ರ ದೇಸಾಯಿ ಮತ್ತಿತರರವು.


ಭಾಗ ಎರಡರಲ್ಲಿ ಸಾಹಿತ್ಯಾವಲೋಕನ ಶೀರ್ಷಿಕೆಯಡಿಯಲ್ಲಿ ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿ, ಕವನ, ಕಥೆ, ನಾಟಕ, ಮಕ್ಕಳ ಸಾಹಿತ್ಯ, ವಚನ, ಬಾನುಲಿ ಚಿಂತನ, ಜೀವನ ಚರಿತ್ರೆ, ಸಂಶೋಧನೆ, ಸಂಸ್ಕೃತಿ, ಮೀಮಾಂಸೆ, ವ್ಯಾಖ್ಯಾನ, ಅನುವಾದ, ವಿಮರ್ಶೆ, ಸಂಪಾದಿತ, ಪ್ರಧಾನ ಸಂಪಾದಕತ್ವ, ಇಂಗ್ಲಿಷ್ ಕೃತಿಗಳು, ಸಂಕೀರ್ಣವೆಂಬ ಪ್ರಕಾರಗಳ ಕೃತಿಗಳನ್ನು; ಪರಿಪೂರ್ಣದೆಡೆಗೆ ಒಂದು ಅವಲೋಕನ – ದೊಡ್ಡ ಬಸಪ್ಪ ಬಳೂರಗಿ, ತಪೋರಂಗ ಒಂದು ವಿವೇಚನೆ – ಡಾ. ಸುಶೀಲಾ ನೆಲ್ಲಿಸರ, ಗುಟ್ಟಿನ ಗಂಟು – ಡಾ‌. ಎನ್ ಮಹೇಶ್ವರಿ, ಜೆ. ಎಸ್.ಎಸ್ ಕಲಾಮಂಟಪ ಪ್ರದರ್ಶಿಸಿದ ಶ್ರೀ ನಿಜಗುಣ ಶಿವಯೋಗಿ – ಪ್ರೊ. ಎ. ಎಸ್ ಜಯರಾಂ, ತಿಪ್ಪೇರುದ್ರಸ್ವಾಮಿ ಅವರ ಮಕ್ಕಳ ಸಾಹಿತ್ಯ – ಪ್ರೊ. ಜಿ. ಅಶ್ವತ್ ನಾರಾಯಣ, ವಚನ ದೀಪ್ತಿ – ಕಮಲಾ ಹೆಮ್ಮಿಗೆ, ಮಾತೆಂಬುದು ಜ್ಯೋತಿರ್ಲಿಂಗ – ಜಿ. ಕೆ ರವೀಂದ್ರ ಕುಮಾರ್, ಕಾಯಕ ತಪಸ್ವಿ – ಕೆ. ವೀರಭದ್ರ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ – ಡಾ. ಸಿ ನಾಗಭೂಷಣ, ತೌಲನಿಕ ಕಾವ್ಯ ಮೀಮಾಂಸೆ – ಡಾ. ಪ್ರಸಾದ ಸ್ವಾಮಿ ಎಸ್, ಬಸವೇಶ್ವರ ವಚನ ದೀಪಿಕೆ – ಡಾ. ಎನ್. ಕೆ. ಕೋದಂಡರಾಮ, ಪ್ರತಾಪರುದ್ರೀಯ ಅನುವಾದ ಒಂದು ಸಮೀಕ್ಷೆ – ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಶೂನ್ಯ ಸಂಪಾದನೆ ಸಂವಾದ – ಡಾ. ಟಿ ಸುಬ್ರಹ್ಮಣ್ಯ, ಮಲೆನಾಡು ಜಾನಪದ – ಡಾ. ಎಚ್. ಜೆ ಲಕ್ಕಪ್ಪಗೌಡ, ಇಂಗ್ಲಿಷ್ ಅನುವಾದ ಕೃತಿಗಳು – ಪ್ರೊ. ಚಂದ್ರಶೇಖರಯ್ಯ, ಅಪ್ರಕಟಿತ ಕೃತಿಗಳು ಯೋಜನೆಗಳು – ಡಾ. ಎಚ್. ಟಿ ಶೈಲಜ. ಹೀಗೆ ಒಟ್ಟಾರೆ ಸಾಹಿತ್ಯವನ್ನು ವಿಮರ್ಶೆ ವಿಶ್ಲೇಷಣೆ ಮಾಡಿರುವ ಮುನ್ನೂರಕ್ಕೂ ಅಧಿಕ ವಿದ್ವಾಂಸರ ಪರಮಾರ್ಶನ ಯೋಗ್ಯ ಲೇಖನಗಳ ಸಂಗ್ರಹವಿದೆ. ಕೊನೆಯಲ್ಲಿ ಕದಳಿವನ ಸಂದರ್ಶನ, ಬದುಕಿನ ಹೆಜ್ಜೆಗಳು ಎಂಬ ವಿಷಯಗಳ ಜತೆಗೆ ಇನ್ನೂ ಐದು ಅನುಬಂಧ ವಿಷಯಗಳನ್ನು ಸೇರಿಸಲಾಗಿದೆ. ಕನ್ನಡ ನಾಡಿನ ಈ ಧೀಮಂತರ ಅಭಿನಂದನಾ ಸಮಾರಂಭಕ್ಕೆ ಎಲ್ಲರೂ ಹಾಜರಿರುವುದೇ ಕೃತಜ್ಞತೆ. ಈ ಕೃತಿಗಳ ಒಳ ಅರಿವಿನ ವಿಶ್ಲೇಷಣೆ ಮುಂದುವರೆಯುವುದು••••••••

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ಎಚ್.ಡಿ ಕೋಟೆ, ಮೈಸೂರು
ಮೊ.ನಂ:- 8884684726
Gmail I’d:- manjunathabr709@gmail.com