————————————ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು
ಕಾಲ ಬದಲಾದಂತೆ ಮೌಲ್ಯಗಳಲ್ಲಿ ಕುಸಿತವಾಗುತ್ತಿರುವುದನ್ನು ಕಟ್ಟಿಕೊಡುವ ಈ ವಚನ 12 ನೇ ಶತಮಾನದಲ್ಲಿ ಅಲ್ಲಮರು ಹೇಳಿದ್ದಾದರೂ ಇಂದಿಗೂ ಪ್ರಸ್ತುತವಾದುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಗುರುವಿನ ಸ್ಥಾನ ಪೂಜ್ಯನೀಯ. ಗುರು-ಶಿಷ್ಯ ಸಂಬಂಧ ಒಂದರ್ಥದಲ್ಲಿ ತಂದೆ-ಮಕ್ಕಳ ಸಂಬಂಧಕ್ಕಿಂತಲೂ ಮಿಗಿಲು. ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲದ ಸ್ಥಾನವನ್ನು ಭಾರತದಲ್ಲಿ ನೀಡಲಾಗಿದೆ. ಎಲ್ಲವೂ ಇಲ್ಲಿ ವ್ಯವಹಾರಿಕವಲ್ಲ. ಕೇವಲ ವ್ಯಾವಹಾರಿಕ ಪದ್ಧತಿಯೇ ಜೀವನವಾದರೆ ಮೌಲ್ಯಗಳಿಗಾಗಲಿ, ಸಂಸ್ಕೃತಿಗಾಗಲಿ ಬೆಲೆಯಿರುವುದಿಲ್ಲ. ಮಾನವ ಸಂಬಂಧಗಳ ಸಮ್ಮಿಲನದ ಅನಂತತೆಯ ಸಾಕಾರವೆತ್ತ ಸಂಸ್ಕೃತಿ ನಮ್ಮದು. ಮಾನವೀಯತೆ ಇಲ್ಲಿ ಕಾನೂನನ್ನೂ ಮೀರಿಸಿ ನಿಲ್ಲುವಂತಹ ಶಕ್ತಿಯನ್ನು ಕೆಲವೊಮ್ಮೆ ಪಡೆದುಕೊಂಡಿರುವುದನ್ನು ಹಲವಾರು ಘಟನೆಗಳಲ್ಲಿ ಕಂಡಿದ್ದೇವೆ.
ಅದರಲ್ಲಿ ಪ್ರಮುಖವಾಗಿ ಗುರು-ಶಿಷ್ಯ ಪರಂಪರೆ. ಗುರುವಾದವನು ತನ್ನ ಕೆಲಸಕ್ಕೆ ಸಂಬಳ ಪಡೆಯುತ್ತಾನೆ. ಪಡೆಯಲೇ ಬೇಕು. ಇಲ್ಲದಿದ್ದರೆ ಅವನ ಜೀವನೋಪಾಯ ಹೇಗೆ ನೆಡೆಯಬೇಕು? ಆದರೆ ಅವನು ತನ್ನ ವೃತ್ತಿಯನ್ನು ಸಂಬಳಕ್ಕೇ ಸೀಮಿತಗೊಳಿಸಿದರೆ ಮಕ್ಕಳನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಬಹುದೇ ಹೊರತು ಅದರಿಂದ ಆಚೆಗೆ ಯಾವ ಮೌಲ್ಯಗಳನ್ನೂ ಬೆಳೆಸಲಾಗುವುದಿಲ್ಲ. ಅಂತಹ ಗುರುಗಳು ಮಕ್ಕಳ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಲಾರರು. ಅದರನ್ನು ಮೀರಿ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಕೆಲಸ ಶಿಕ್ಷಕರದಾಗಿರಬೇಕು. ಸೇವೆ ಮತ್ತು ತ್ಯಾಗ ವೃತ್ತಿಯಲ್ಲಿ ಮೈದಳೆಯಬೇಕು. ನಮ್ಮ ಪರಂಪರೆ ಗುರುವಿಗೆ ಮಹತ್ತರ ಸ್ಥಾನ ನೀಡಿರುವುದು ಇಂತಹ ಕಾರಣಗಳಿಗಾಗಿಯೇ. ಕಾಲ ಬದಲಾದಂತೆ ಗುರುವಿನ ಸ್ಥಾನ ಗುರು-ಶಿಷ್ಯರ ಬಾಂಧವ್ಯ ಕೇವಲ ವ್ಯಾವಹಾರಿಕತೆಯಲ್ಲಿ ಕೊನೆಗೊಳ್ಳುತ್ತಿರುವುದನ್ನು ಕಾಣುತ್ತೇವೆ.
ಇದಕ್ಕೆ ಕೇವಲ ವಿದ್ಯಾರ್ಥಿಗಳನ್ನು ದೂಷಿಸುತ್ತಾ ನನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣತನವನ್ನು ಪ್ರದರ್ಶಿಸಲಾರೆ. ಶಿಕ್ಷಕರಾದವರು ವೃತ್ತಿ ಹಾಗೂ ತಮ್ಮ ಜೀವನವನ್ನು ಕಟ್ಟಿಕೊಳ್ಳುವ, ಸಮಾಜದಲ್ಲಿ ಅವರು ನೆಡೆದುಕೊಳ್ಳುವ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಎಲ್ಲಾ ಆಯಾಮಗಳೂ ಅವರನ್ನು ವಿದ್ಯಾರ್ಥಿಗಳಾಗಲಿ ಸಮಾಜವಾಗಲಿ ನೋಡುವ ದೃಷ್ಟಿಕೋನವನ್ನು ನಿರ್ಧರಿಸುತ್ತವೆ. ಹಾಗೂ ಇಂತಹ ಪವಿತ್ರ ಸಂಬಂಧಗಳು ಕುಸಿಯುತ್ತಿರುವುದಕ್ಕೆ ವ್ಯವಸ್ಥೆಯೂ ಪ್ರಮುಖ ಕಾರಣವಾಗಿದೆ. ವೈಚಾರಿಕ ಆಲೋಚನಾ ಪರತೆಯನ್ನು ಕಳೆದುಕೊಳ್ಳುತ್ತಿರುವ ಕಾಲಮಾನದಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿದ ಕಾರ್ಯಕ್ರಮವೊಂದು ಕಳೆದ ಭಾನುವಾರ ನೆಡೆಯಿತು. ತಿಪಟೂರು ತಾಲ್ಲೂಕು ಕೆರಗೋಡಿ-ರಂಗಾಪುರ ಶ್ರೀ ಮಠದಲ್ಲಿ. 1992 ರಿಂದ1995 ರ ಅವಧಿಯಲ್ಲಿ ಶ್ರೀ ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಕೆಲವರು ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದರೆ ಕೆಲವರೂ ತಮ್ಮದೇ ಆದ ಸ್ವ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಕೆಲವರು ಆದರ್ಶ ರೈತರಾಗಿ ಈ ನಾಡಿಗೆ ಅನ್ನನೀಡುತ್ತಾ ಸ್ವಾವಲಂಬಿಗಳಾಗಿ ಬದುಕು ಕಂಡುಕೊಂಡಿದ್ದಾರೆ.
ಯಾವ ಕೆಲಸವಾದರೇನಂತೆ ‘ಕಾಯಕವೇ ಕೈಲಾಸ’ ಅಲ್ಲವೆ. ಶ್ರೀಮಠ ಅಂತಹ ಸಂಸ್ಕಾರವನ್ನು ಅವರಿಗೆ ನೀಡಿದೆ. ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಮಠ ಏಳು ಜನ ಗುರುವರ್ಯರನ್ನು ಕಂಡಿದೆ. ಹೆಸರಿನಲ್ಲೇ ವಿಶೇಷ ಹೊಂದಿರುವ ಶ್ರೀ ಗುರು ಪರದೇಶಿಕೇಂದ್ರ ಮಠವು ಬಸವಣ್ಣನವರ ಜಾತ್ಯತೀತ ಮತ್ತು ಕಾಯಕ ನಿಷ್ಠೆಯ ಸೂತ್ರವನ್ನು ತನ್ನದಾಗಿಸಿಕೊಂಡು ಧರ್ಮಾತೀತ ಹಾಗೂ ಜಾತ್ಯತೀತವಾಗಿ ಸಾವಿರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಾ ಬಂದಿರುವುದು ಶ್ಲಾಘನೀಯ. ಅಂತಹ ಸಂಸ್ಕಾರದಲ್ಲಿ ಬೆಳೆದು ಮೈಗೂಡಿಸಿಕೊಂಡ ಗುಣವೇ 30 ವರ್ಷಗಳು ಕಳೆದರೂ ಮಾಸದೆ ಮತ್ತೆ ಹಿಂದಿನ ಹಾದಿಯನ್ನು ತಿರುಗಿ ನೋಡುವಂತೆ ಮಾಡಿದೆ. ಅವರೆಲ್ಲರ ಸಂಘಟನೆಯ ಫಲವಾಗಿ ಮೂಡಿದ ಕಾರ್ಯಕ್ರಮವೇ ‘ಗುರುವಂದನೆ ಹಾಗೂ ಭಕ್ತಿ ಸಮರ್ಪಣೆ’ ಕಾರ್ಯಕ್ರಮ. ಪೂಜ್ಯರಾದ ಶ್ರೀ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆಡೆದ ಕಾರ್ಯಕ್ರಮ ಸಮಸ್ತ ಭಕ್ತ ಸ್ತೋಮವನ್ನು ನಿಬ್ಬೆರಗಾಗುವಂತೆ ಮಾಡಿತ್ತು. ತಮ್ಮ ಪೂರ್ವಾಶ್ರಮದಲ್ಲಿ ಶ್ರೀ ಮಠದಲ್ಲಿ ವ್ಯಾಸಂಗ ಮಾಡಿದ ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಯವರು ಗುರುವಂದನೆ ಸ್ವೀಕರಿಸಿದ್ದು ಗುರು-ಶಿಷ್ಯ ಪರಂಪರೆಗೆ ಸಾಕ್ಷಿಯಾಗಿತ್ತು. ಶಿಷ್ಯನೋರ್ವ ಗುರು ಸ್ಥಾನವನ್ನೇರೆ ಪೂರ್ವಾಶ್ರಮದ ಗುರುವಿನ ಸಮ್ಮುಖದಲ್ಲಿ ಪೀಠಸ್ಥರಾಗಿ ಗುರುದ್ವಯರಿಗೆ ಶಿಷ್ಯ ವೃಂದ ಸಲ್ಲಿಸಿದ ಭಕ್ತಿ ಸಮರ್ಪಣೆ “ನ ಭೂತೋ ನ ಭವಿಷ್ಯತಿ” ಅನ್ನುವಂತಿತ್ತು. ಪೂರ್ವಕಾಲವೊಂದಕ್ಕೆ ನಮ್ಮನ್ನು ಕರೆದೊಯ್ದಂತಿತ್ತು. “ಶಿಷ್ಯ ಎಷ್ಟೇ ದೊಡ್ಡವನಾದರೂ ಗುರುವಿನ ಮುಂದೆ ಶಿಷ್ಯನೇ ಆಗಿರುತ್ತಾನೆ.
ಮುಖ ಎಷ್ಟೇ ದೊಡ್ಡವನಾದರೂ ತಾಯಿಯ ಮುಂದೆ ಚಿಕ್ಕವನೆ” ತಾಯಿಗೆ ಮಗ ಮಗನೇ, ಗುರುವಿಗೆ ಶಿಷ್ಯ ಶಿಷ್ಯನೇ. ಇಂತಹ ಮನಸ್ಥಿತಿಯನ್ನು ಭಾರತೀಯ ಮನಸ್ಸುಗಳಲ್ಲಿ ಮಾತ್ರ ಕಾಣಲು ಸಾಧ್ಯ. ಕೆರಗೋಡಿ ರಂಗಾಪುರ ಶ್ರೀ ಮಠದಲ್ಲಿನ ಕಾರ್ಯಕ್ರಮ 12 ನೇ ಶತಮಾನದ ಅನುಭವ ಮಂಟಪದಂತೆ ಶೋಭಾಯಮಾನವಾಗಿದ್ದಂತೂ ಸತ್ಯ. ಅಷ್ಟೇ ಅಲ್ಲ ತಮ್ಮ ಬದುಕನ್ನು ಶಿಕ್ಷಕ ವೃತ್ತಿಯಲ್ಲಿ ಸವೆಸಿ ನಿವೃತ್ತಿ ಜೀವನ ನೆಡೆಸುತ್ತಿರುವ ಹತ್ತಾರು ಶಿಕ್ಷಕರನ್ನು ಶಿಷ್ಯಸ್ತೋಮ ಗುರುತಿಸಿ ಆಹ್ವಾನಿಸಿ ಗೌರವಿಸಿದ್ದು ಶ್ಲಾಘನೀಯ.
ಈ ಕಾರ್ಯಕ್ರಮ ಕೇವಲ ಕಾರ್ಯಕ್ರಮವಾಗಿ ಉಳಿಯದೆ ಇಡೀ ನಾಡಿಗೆ ನೀಡಿದ ಮಹಾ ಸಂದೇಶವೆಂದರೆ ತಪ್ಪಾಗಲಾರದು. ಅಳಿಯುತ್ತಿರುವ ಪರಂಪರೆಯ ನಡೆವೆ ಓಯಸಿಸ್ ನಂತೆ ಮೂಡಿದ ಸುಂದರ ಕಾರ್ಯಕ್ರಮ ಮುಂದಿನ ಪೀಳಿಗೆಗೂ ಆದರ್ಶಪ್ರಾಯವಾದುದು. ಯುವ ಶಕ್ತಿಯ ಚಿಂತನೆಗಳು ಅಭಿವೃದ್ದಿಯ ವೇಗದಲ್ಲಿ ಪರಂಪರೆಯನ್ನು ಪಕ್ಕಕ್ಕೆ ತಳ್ಳಿ ಸಂಸ್ಕೃತಿ ಸಂಸ್ಕಾರಗಳನ್ನು ಬದಿಗೊತ್ತಿ ವೇಗದ ಜಗತ್ತಿನಲ್ಲಿ ಹಣಗಳಿಕೆಯ ಏಣಿಯ ಮೇಲೆ ಏರುತ್ತಿರುವಾಗ ಹಿಂದಿರುಗಿ ನೋಡುವ ಮಹಾಸಾಹಸ ಮೆರೆದವರು ಈ ಶಿಷ್ಯಸ್ತೋಮ. ಶ್ರೀ ಮಠದ ಆಯಸ್ಕಾಂತೀಯ ಶಕ್ತಿ ಇಂತಹದ್ದೊಂದು ಕೆಲಸಕ್ಕೆ ಪ್ರೇರಣೆ ನೀಡಿರುವುದರಲ್ಲಿ ಎರಡು ಮಾತಿಲ್ಲ. ಏನೇ ಆಗಲಿ ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ನೆಡೆದು ಯುವ ಸಮೂಹಕ್ಕೆ ಒಳ್ಳೆಯ ಸಂದೇಶವನ್ನು ತಲುಪಿಸುವಂತಾಗಲಿ. ಗುರು-ಶಿಷ್ಯ ಪರಂಪರೆ ಮತ್ತೆ ಮೇಳೈಸಿ ಮುಂದಿನ ತಲೆಮಾರಿಗೆ ಪ್ರೇರಣೆ ನೀಡಲಿ. ಈ ಮಹಾ ಸಮ್ಮಿಲನದ ಪ್ರೇರಣ ಶಕ್ತಿಯಾದ ಶ್ರೀ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾ ಸ್ವಾಮಿಜಿಗಳ ಪಾದ ಪದ್ಮಂಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇನೆ. ಹಾಗೂ ಕಾರ್ಯಕ್ರಮಕ್ಕೆ ಶ್ರಮಿಸಿದ ಸಮಸ್ತ ಶಿಷ್ಯ ಸಮೂಹಕ್ಕೆ ಶರಣು ಶರಣಾರ್ಥಿಗಳು.

ಡಾ.ಕಿರಣ್ ಸಿಡ್ಲೇಹಳ್ಳಿ
ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರು
ReplyForward |