ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕು ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಬಂದ್ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ರೈತ ಮುಖಂಡರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ಬಂದ್ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಕೂಡಲೇ ಕೃಷಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರ ಅನಾನುಕೂಲ ಕುರಿತು ತಜ್ಞರ ತಂಡ 170 ಪುಟಗಳ ವರದಿ ತಯಾರಿಸಿ ನೀಡಿದ್ದರೂ ಸಹ ಸರ್ಕಾರ ತನ್ನ ಮೊಂಡತನ ಬಿಡುತ್ತಿಲ್ಲ. ದಿನದಿಂದ ದಿನಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಉಗ್ರ ರೂಪು ಪಡೆದುಕೊಳ್ಳುತ್ತಿದ್ದು, 224 ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ರಾಜ್ಯದಲ್ಲಿಯೂ ಹೋರಾಟ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತಂದು ನಮ್ಮ ನಮ್ಮಲ್ಲೆ ಒಡೆದು ಆಳುವ ತಂತ್ರ ರೂಪಿಸುತ್ತಿದೆ. ಉಚಿತವಾಗಿ ರೈತರ ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದ ವಿದ್ಯುತ್ ಅನ್ನು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ. ನೂತನ ಕೃಷಿ ಕಾಯ್ದೆ ಜಾರಿಗೆ ತರಬೇಕು ಎಂದು ಯಾವೊಬ್ಬ ರೈತನೂ ಅರ್ಜಿ ಹಾಕಿರಲಿಲ್ಲ. ಆದರೂ ನರೇಂದ್ರ ಮೋದಿ ಸರ್ಕಾರ ತಮಗೆ ಇಚ್ಛೆ ಬಂದಂತೆ ಕಾನೂನು ರೂಪಿಸುತ್ತಿದೆ. ಇದನ್ನು ರೈತ ಸಂಘಟನೆ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಮಂಕುಬೂದಿ ಎರಚುತ್ತಿರುವ ಕೇಂದ್ರ ಸರ್ಕಾರ ಎಪಿಎಂಸಿ ವ್ಯವಸ್ಥೆಯನ್ನು ರದ್ದು ಮಾಡಲು ಹೊರಟಿದೆ. ನೂತನ ಕಾಯ್ದೆಯಿಂದ ಬೆಳೆದ ಬೆಲೆಗಳಿಗೆ ಮುಂದಿನ ದಿನಗಳಲ್ಲಿ ಸರಿಯಾದ ಬೆಲೆ ಸಿಗುವುದಿಲ್ಲ. ಕೇವಲ ಮಾತು ಮತ್ತು ಪುಸ್ತಕದಲ್ಲಿ ಉಳಿಯುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಹೈನುಗಾರಿಕೆಯನ್ನು ನಿಲ್ಲಿಸಲು ಹೊರಟಿತ್ತು. ಇದಕ್ಕೆ ಹೋರಾಟ ನಡೆದ ಹಿನ್ನೆಲೆ ಸ್ಥಗಿತವಾಯಿತು. ನೂತನ ಕಾಯ್ದೆಗಳ ಬಗ್ಗೆ ರಾಜ್ಯದಿಂದ ಗೆದ್ದ ಯಾವೊಬ್ಬ ಸಂಸದ, ಶಾಸಕನೂ ಚಕಾರ ಎತ್ತುತ್ತಿಲ್ಲ. ಅದರ ಸಮರ್ಥನೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ವಿರೋಧ ಪಕ್ಷದವರು ಇದರಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿ ನಂತರ ಬಿಡುಗಡೆ ಗೊಳಿಸಿದರು.

ಟ್ರಾಫಿಕ್ ಜಾಮ್: ಪಟ್ಟಣದಲ್ಲಿ ಸುಮಾರು ಅರ್ಧ ತಾಸು ಹೆದ್ದಾರಿ ತಡೆ ನಡೆಸಿದ ಹಿನ್ನೆಲೆಯಲ್ಲಿ ವಾಹನಗಳು ಕಿ.ಮೀ ದೂರ ನಿಂತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ದ್ವಿಚಕ್ರ ವಾಹನ ಸವಾರರು ಪರ್ಯಾಯ ಮಾರ್ಗದಿಂದ ತೆರಳುತ್ತಿದ್ದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊನ್ನೇಗೌಡನಹಳ್ಳಿ ಶಿವಮಲ್ಲು, ಶಾಂತಮಲ್ಲಪ್ಪ, ಹಂಗಳ ಮಾಧು, ಹಸಿರು ಸೇನೆ ದಿಲೀಪ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಚಹಳ್ಳಿ ಸ್ವಾಮಿ, ನಿಟ್ರೆ ಮಹದೇವಶೆಟ್ಟಿ, ವಸಂತಕುಮಾರ್, ಪಾಪಣ್ಣ, ಲೋಕೇಶ್ ಸೇರಿದಂತೆ ಇತರರು ಹಾಜರಿದ್ದರು.

 

By admin