ಗುಂಡ್ಲುಪೇಟೆ: ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.88 ರಷ್ಟು ಮತದಾನ ಆಯಿತು. ಬಹುತೇಕ ಎಲ್ಲಾ ಕಡೆ ಶಾಂತಿಯುತವಾಗಿ ಮತದಾನ ನಡೆಯಿತು.
ಹಂಗಳ ಗ್ರಾಮದಲ್ಲಿ ಬಿಜೆಪಿ ಮುಖಂಡರನ್ನು
ಗುಂಪಾಗಿ ನಿಲ್ಲಬೇಡಿ ಎಂದಿದ್ದಕ್ಕೆ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರೇ ಮನವೊಲಿಸಿದರು.
ತೆರಕಣಾಂಬಿ ಹೋಬಳಿಯ ಶ್ಯಾನಡ್ರಳ್ಳಿ ಗ್ರಾಮದಲ್ಲಿ ಮತದಾನಕ್ಕೂ ಮುನ್ನ ವಾಮಚಾರ ಮಾಡಿದ್ದಾರೆ ಎಂದು ಗೊಂದಲ ಸೃಷ್ಟಿ ಆಗಿತ್ತು. ಉಳಿದಂತೆ ಎಲ್ಲೂ ಸಹ ಸಮಸ್ಯೆ ಆಗದೆ ಶಾಂತಿಯುತವಾಗಿ ಮತದಾನ ಆಯಿತು.
ಮತಗಟ್ಟೆಗಳ ಬಳಿ ಕಾರ್ಯಕರ್ತರು ಮತ್ತು ಮುಖಂಡರು ಮತದಾನ ಮಾಡಲು ಬರುವವರನ್ನು ತಮ್ಮ ಚಿಹ್ನೆಗಳಿಗೆ ಮತದಾನ ಮಾಡುವಂತೆ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಸೂಕ್ಷ್ಮ ಮತಗಟ್ಟೆಗಳಿಗೆ ಭೇಡಿ ನೀಡಿ ಪರಿಶೀಲನೆ ನಡೆಸಿದರು.
ಕಾಡಂಚಿನ ಗ್ರಾಮದಲ್ಲಿ ಬುಡಕಟ್ಟು ಜನರು ಮತಗಟ್ಟೆಗಳಿಗೆ ಬರಲು ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡಿ ಕರೆ ತರುತ್ತಿದ್ದರು.
ಕೆಲವೊಂದು ಗ್ರಾಮದಲ್ಲಿ ಮತದಾರರು ಮತದಾನಕ್ಕೂ ಮುಂಚೆ ಅಭ್ಯರ್ಥಿಗಳ ಬಳಿ ಹಣ ಮತ್ತು ಮದ್ಯಕ್ಕೆ ಬೇಡಿಕೆ ಇಡುತ್ತಿದ್ದರು. ಯಾವುದು ಇಲ್ಲವಾದಲ್ಲಿ ವಿರುದ್ಧವಾಗಿ ಮತದಾನ ಮಾಡುತ್ತೇವೆಂದು ಎದುರಿಸುತ್ತಿದ್ದರು.
ಸ್ವ ಗ್ರಾಮದಲ್ಲಿ ಶಾಸಕ ನಿರಂಜನ ಮತದಾನ:
ಶಾಸಕ ಸಿ.ಎಸ್. ನಿರಂಜನಕುಮಾರ್ ಅವರು ತಮ್ಮ ಸ್ವಗ್ರಾಮವಾದ ಚೌಡಹಳ್ಳಿಯಲ್ಲಿ ಪತ್ನಿ, ಪುತ್ರ ಹಾಗು ಬೆಂಬಲಿಗರೊಂದಿಗೆ ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರವೇ ಸೇರಿದಂತೆ 40 ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ 30ಕ್ಕಿಂತ ಅಧಿಕ ಪಂಚಾಯಿತಿಯಲ್ಲಿ ಗದ್ದುಗೆ ಹಿಡಿಯಲಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಈ ಸಲ ನಮ್ಮ ಕೈ ಹಿಡಿಯಲಿದೆ. ಜೊತೆಗೆ ಕ್ಷೇತ್ರದಲ್ಲಿ ವೈಯಕ್ತಿಕವಾಗಿಯು ಹೆಚ್ಚಿನ ಅಭಿವೃದ್ಧಿ ಮಾಡಿರುವ ಹಿನ್ನೆಲೆಯಲ್ಲಿ ಜನರು ಒಲವು ತೋರಿದ್ದಾರೆ. ಆದ್ದರಿಂದ ಈ ಬಾರಿ ಹೆಚ್ಚಿನ ಪಂಚಾಯಿತಿಯಲ್ಲಿ ಬಹಳ ಬಿಜೆಪಿ ಬೆಂಬಲಿತರು ಜಯ ಗಳಿಸಲಿದ್ದಾರೆ ಎಂದರು.
ಮಾಜಿ ಸಚಿವರಿಂದ ಮತದಾನ:
ಮಾಜಿ ಸಚಿವರಾದ ಡಾ.ಗೀತಾ ಮಹದೇವಪ್ರಸಾದ್ ಹಾಲಹಳ್ಳಿ ಇಂದು ಮತದಾನ ಮಾಡಿದರು. ಇವರೊಂದಿಗೆ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಪ್ರಸಾದ್, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್ ಸೇರಿದಂತೆ ಕುಟುಂಬಸ್ಥರು ಮತ ಚಲಾಯಿಸಿದರು.
ನಂತರ ಮಾತನಾಡಿದ ಗಣೇಶ್ ಪ್ರಸಾದ್, ಈ ಸಲ 23ರಿಂದ 25 ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ. ಈ ಹಿಂದೆ ಗೀತಾ ಮಹದೇವಪ್ರಸಾದ್ ಮತ್ತು ಮಹದೇವಪ್ರಸಾದ್ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಒಲವು ತೋರಿದ್ದು, ಚುನಾವಣೆಗೂ ಮುನ್ನ ಅಧಿಕ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಅಶ್ವಿನಿ ಸ್ವಗ್ರಾಮವಾದ ಬೊಮ್ಮಲಾಪುರದಲ್ಲಿ ಮತ ಚಲಾಯಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧು ಶಂಕರ್ ಸೋಮಹಳ್ಳಿಯಲ್ಲಿ ಮತದಾನ ಮಾಡಿದರು.
ಚಿರಕನಹಳ್ಳಿ ಮತದಾರರಿಂದ ಪ್ರತಿಭಟನೆ:
ಚಿರಕನಹಳ್ಳಿಯ ಸುಮಾರು 30ಕ್ಕಿಂತ ಹೆಚ್ಚು ಜನರ ಹೆಸರು ಮತದಾರರ ಪಟ್ಟಿಯಲ್ಲಿ ಕೈ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ತಹಸೀಲ್ದಾರ್ ನಂಜುಂಡಯ್ಯ ಜನರ ಮನವೊಲಿಸಿ ನಂತರ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಮತದಾನ ಪ್ರಕ್ರಿಯೆ ನಂತರ ಪಟ್ಟಣದ ಸೆಂಟ್ ಜಾನ್ಸ್, ದೊಡ್ಡಹುಂಡಿ ಬೋಗಪ್ಪ, ಜೆಎಸ್ಎಸ್ ಕಾಲೇಜಿನಲ್ಲಿ ಪೊಲೀಸರ ಸೂಕ್ತ ಭದ್ರತೆಯೊಂದಿಗೆ ಮತ ಪೆಟ್ಟಿಗೆಗಳನ್ನು ಈಡಲಾಗಿದೆ.
ವರದಿ: ಬಸವರಾಜು ಎಸ್ ಹಂಗಳ