ಗುಂಡ್ಲುಪೇಟೆ: ಪಟ್ಟಣದಲ್ಲಿ ಶನಿವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಪಟ್ಟಲದಮ್ಮ ದೇವಾಲಯವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ರಾತ್ರಿ ಮಡೆ ಹೊಯ್ಯುವುದು ಇತರೆ ಧಾರ್ಮಿಕ ಕಾರ್ಯಗಳು ನೆರವೇರಿದವು. ಶನಿವಾರ ಬೆಳಗ್ಗೆಯಿಂದ ಪಟ್ಟಣ ಮತ್ತು ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಜಾತ್ರೆ ಮತ್ತು ಮೆರವಣಿಗೆ ಹಿನ್ನೆಲೆಯಲ್ಲಿ ನಾಯಕ ಸಮುದಾಯದವರು ದೇವಾಲಯದ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಂತರ ಅಲಂಕೃತ ಸಾರೋಟಿನಲ್ಲಿ ಶ್ರೀ ಪಟ್ಟಲದಮ್ಮನವರ ಉತ್ಸವ ಮೂರ್ತಿ ಇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ನಾಯಕ ಜನಾಂಗದ ಹಿರಿಯ ಮುಖಂಡ ಮತ್ತು ಪುರಸಭೆ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.
ಗಾರುಡಿ ಗೊಂಬೆ, ಪೂಜಾ ಕುಣಿತ, ವೀರಭದ್ರ ಕುಣಿತ, ಮಂಗಳ ವಾದ್ಯ, ಕೇರಳದ ಚೆಂಡೆ, ರಾಮಾಯಣ ಪಾತ್ರಧಾರಿಗಳು, ಪೂರ್ಣ ಕುಂಭ, ಸತ್ತಿಗೆ, ಸುರಪಾನಿ, ಮಕ್ಕಳ ಕಡ್ಡಿ ವರಸೆ ಇತರೆ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಯುವಕರು ನೃತ್ಯ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಳೇ ಬಸ್ ನಿಲ್ದಾಣದ ಬಳಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಕಲಾತಂಡಗಳ ತಾಳಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ರಾತ್ರಿ ತನಕ ನಡೆದ ಮೆರವಣಿಗೆ ಮೂಲಸ್ಥಾನದಲ್ಲಿ ಕೊನೆಗೊಂಡಿತು.
ಸಮುದಾಯದ ಮುಖಂಡರಾದ ಎಂ.ಪುಟ್ಟರಂಗನಾಯಕ, ಎನ್.ಮಲ್ಲೇಶ್, ಮಾಧು, ರಾಮು, ಅವ್ವ ಕುಮಾರ್ ಸೇರಿದಂತೆ ನಾಯಕ ಜನಾಂಗದ ಮುಖಂಡರು ಹಾಜರಿದ್ದ