* ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಅನೇಕ ಮೊದಲನ್ನು ಮಾಡಿ ತೋರಿಸಿದವರು; ಸಚಿವ ಸೋಮಶೇಖರ್

* ಶಕ್ತಿ, ಆತ್ಮವನ್ನು ಸೃಷ್ಟಿ ಮಾಡಲೂ ಆಗುದು, ನಾಶ ಮಾಡಲೂ ಆಗದು; ನಿರ್ಮಲಾನಂದನಾಥ ಸ್ವಾಮೀಜಿ

ಮಂಡ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನವನ್ನು ಮುಖ್ಯಮಂತ್ರಿಗಳು, ನಾನು ಸಹಿತ ನಮ್ಮ ಸರ್ಕಾರದ ಎಲ್ಲ ಸಚಿವರು ಸಹ ಪಾಲನೆ ಮಾಡುತ್ತೇವೆ. ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ನಾಡಿನಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯುತ್ಸವ ಹಾಗೂ 8ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಅನೇಕ ಮೊದಲನ್ನು ಮಾಡಿ ತೋರಿಸಿದ್ದು, ಅವರ ಹಾದಿಯಲ್ಲಿ ಈಗ ಶ್ರೀ ಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ ಎಂದು ತಿಳಿಸಿದರು.

ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಹುಟ್ಟೂರು ಅಭಿವೃದ್ಧಿಗೆ 25 ಕೋಟಿ ರೂ. ಮಂಜೂರು

ಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಬಿಡದಿ ತಾಲೂಕಿನ ಹುಟ್ಟೂರು ಬಾನಂದೂರಿನ ಅಭಿವೃದ್ಧಿಗಾಗಿ ಸಂಪುಟದಲ್ಲಿ 25 ಕೋಟಿ ರೂಪಾಯಿ ಅನುದಾನ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ಅಲ್ಲಿ ಏನೇನು ಕೆಲಸಗಳನ್ನು ಮಾಡಬೇಕೋ ಆ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರ ಮಾಡಲಿದೆ. ಸಚಿವರಾದ ವಿ.ಸೋಮಣ್ಣ, ಕೆ.ನಾರಾಯಣಗೌಡರ ಸಹಿತ ನಾವೆಲ್ಲರೂ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ ಎಂದು ತಿಳಿಸಿದರು.

ಬೆಳ್ಳುರು ಮೆಡಿಕಲ್ ಕಾಲೇಜು ಪ್ರಸ್ತಾವನೆ ಪುನಃ ಸಂಪುಟಕ್ಕೆ; ಸಚಿವ ಎಸ್ ಟಿ ಎಸ್

ಬೆಳ್ಳೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಸರ್ಕಾರದ ಗಮನದಲ್ಲಿದೆ. ಈ ವಿಷಯವನ್ನು ಸಣ್ಣ ಬದಲಾವಣೆಗಳೊಂದಿಗೆ ಮತ್ತೊಮ್ಮೆ ಸಂಪುಟಕ್ಕೆ ತಂದು ಕೆಲಸ ಮಾಡಿಕೊಡುತ್ತೇವೆ. ಶ್ರೀ ಮಠದ ಯಾವುದೇ ಕಾರ್ಯಗಳಿರಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅದಕ್ಕೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಸಹ ಶ್ರೀಮಠವನ್ನು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಮಠದ ಎಲ್ಲ ಕಾರ್ಯಗಳಲ್ಲಿಯೂ ನಮ್ಮ ಸಹಕಾರ ಇದ್ದೇ ಇರಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮಾತನಾಡಿ, ಎಸ್.ಟಿ.ಸೋಮಶೇಖರ್ ಅವರು ಶ್ರೀಮಠದ ಭಕ್ತರಾಗಿದ್ದು, ಕೆಲಸದ ಒತ್ತಡದ ನಡುವೆಯೂ ನಮ್ಮ ಸಂಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಾರೆ. ಇಂದೂ ಸಹ ಅವರು ಕ್ಷೇತ್ರದಲ್ಲಿ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಆಗಮಿಸಿದ್ದಾರೆ ಎಂದು ತಿಳಿಸಿದರು.

ಆದಿಚುಂಚನಗಿರಿ ಪೀಠಕ್ಕೆ 1800 ವರ್ಷಗಳ ಇತಿಹಾಸವಿದ್ದು, 71 ಮಹಾಸ್ವಾಮೀಜಿಗಳು ಗದ್ದುಗೆಯನ್ನು ಅಲಂಕರಿಸಿ ಶ್ರೀ ಸಂಸ್ಥಾನದಿಂದ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಅದೆಷ್ಟೋ ಸಿದ್ಧಿಪುರುಷರು ಜ್ವಾಲಾಪೀಠದಲ್ಲಿ ಕುಳಿತಿದ್ದಾರೆ. ಅಷ್ಟು ಶಕ್ತಿಯುತ ಪೀಠದಲ್ಲಿ ನಾವು ಪೀಠಾಧಿಪತಿಗಳು ವರ್ಷದಲ್ಲಿ ಮೂರು ಬಾರಿ ಮಾತ್ರ ಕುಳಿತು ಆಶೀರ್ವದಿಸುತ್ತೇವೆ. ಕಾರಣ ಅದು ಶಿವ ತಪಸ್ಸು ಮಾಡಿದ ಕ್ಷೇತ್ರವೂ ಆಗಿದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಅಪ್ಪ ಸಾಕಿರುವುದನ್ನು, ಅಮ್ಮನ ಪ್ರೀತಿ, ಶಿಕ್ಷಕರ ಕಾಳಜಿಯನ್ನು ಇಂದು ಹಲವರು ಮರೆಯುತ್ತಾರೆ. ಆದರೆ, ನಮ್ಮ ಸಾಧನೆಗೆ ಮೆಟ್ಟಿಲಾದವರನ್ನು ಮರೆಯಬಾರದು. ಇನ್ನು ಯಾರು ಸಹ ಇಲ್ಲಿಲ್ಲ ಎಂಬ ಮಾತಿಲ್ಲ. ಪೂಜ್ಯ ಜಗದ್ಗುರುಗಳು ಇಲ್ಲಿಲ್ಲ ಎಂಬ ಚಿಂತೆ ಬೇಡ. ಆದರೆ, ಅವರ ಪ್ರೀತಿ, ಅವರ ಕಾರ್ಯಗಳು ನಮ್ಮ ಜೊತೆಯೇ ಇದೆ. ಶಕ್ತಿಯನ್ನು ಹಾಗೂ ಆತ್ಮವನ್ನು ಸೃಷ್ಟಿ ಮಾಡಲೂ ಆಗುವುದಿಲ್ಲ, ನಾಶ ಮಾಡಲೂ ಆಗದು. ಆದರೆ, ಇದನ್ನು ವರ್ಗಾಯಿಸಬಹುದಾಗಿದೆ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ನಾರಾಯಣಗೌಡ ಮಾತನಾಡಿ, ಇಂದು ನಾನು ಈ ಸ್ಥಾನದಲ್ಲಿರಲು ಪೂಜ್ಯ ಸ್ವಾಮೀಜಿಯವರಾದ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಆಶೀರ್ವಾದವೇ ಕಾರಣ ಎಂದು ತಿಳಿಸಿದರು.

ಶಾಸಕರಾದ ಸುರೇಶ್ ಗೌಡ, ಮಾಜಿ ಶಾಸಕರಾದ ವಾಸು, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

By admin