ಚಾಮರಾಜನಗರ: ಸರಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು, ಹಾಲಿಅತಿಥಿಶಿಕ್ಷಕರನ್ನೇ ಸೇವೆಯಲ್ಲಿ ವಿಲೀನಗೊಳಿಸಬೇಕು, ಉದ್ಯೋಗಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತ್ತು.

ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಮಾವೇಶಗೊಂಡ ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿಉಪನ್ಯಾಸಕರು ಘೋಷಣೆಗಳನ್ನು ಕೂಗಿದರು.ನಂತರ ಜಿಲ್ಲಾಡಳಿತದ ಮೂಲಕ ಉನ್ನತಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಕಳೆದ ೧೫ ರಿಂದ ೨೦ ವರ್ಷಗಳಿಂದ ಸರಕಾರ ನೀಡುತ್ತಿದ್ದ ಕಡಿಮೆ ಗೌರವಧನಕ್ಕೆ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳನ್ನು ಭೋದಿಸುತ್ತಿದ್ದಾರೆ.ಕಳೆದ ಕೆಲತಿಂಗಳಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಣಾಮ ಗೌರವಧನದಿಂದ ಜೀವನನಿರ್ವಹಣೆಯೇ ಕಷ್ಟವಾಗಿದೆ, ಕಳೆದ ಆರೇಳು ತಿಂಗಳು ನಮ್ಮ ಸೇವೆಯನ್ನು ಕಾಯಂ ಮಾಡಬೇಕು, ಉದ್ಯೋಗಭದ್ರತೆ ಒದಗಿಸಬೇಕು ಎಂದು ಸರಕಾರದ ಮೇಲೆ ಒತ್ತಾಯ ಹೇರುತ್ತಿದ್ದರೂ, ನಮ್ಮ ಹಕ್ಕೊತ್ತಾಯ ಈಡೇರಿಕೆಗೆ ಸರಕಾರ ಮುಂದಾಗಿಲ್ಲ ಎಂದು ಆರೋಪಿಸಿದರು.


ಕೆಸಿಎಸ್‌ಆರ್‌ಸಿ(ಸಾಮಾನ್ಯ ನೇಮಕಾತಿ) ೧೯೭೭-(೩) ೧೪ ರಅಡಿ ವೃಂದ ಮತ್ತು ನೇಮಕಾತಿ ನಿಯಮಗಳಡಿ ತಿದ್ದುಪಡಿ ತಂದು ತಾತ್ಕಾಲಿಕ ನೌಕರರನ್ನು ಕಾಯಂ ಮಾಡುವ ಅವಕಾಶವಿದೆ, ಸರಕಾರ ಈಗಲಾದರೂ ಈ ವಿಚಾರವನ್ನು ಸಚಿವ ಸಂಪುಟದ ಮುಂದೆ ಇಟ್ಟು, ಸಮಗ್ರವಾಗಿ ಚರ್ಚಿಸಿ, ನಮ್ಮ ಸೇವೆಗೆ ಭದ್ರತೆ ಒದಗಿಸಿ, ಪೂರ್ಣಾವಧಿ ಸೇವೆಸಲ್ಲಿಸುವ ಕಾಯಂ ನೌಕರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಡಿ.೧೬ ರಂದು ಜಿಲ್ಲಾಸಮಿತಿ ವತಿಯಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ, ತಮ್ಮ ಹಕ್ಕೊತ್ತಾಯಗಳಿಗೆ ಸರಕಾರ ಅಸ್ತು ಎನ್ನುವವರೆಗೂ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.
ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ದೇವರಾಜು, ಜಿಲ್ಲಾಸಂಯೋಜಕ ಮನುಕುಮಾರ್, ಮನುಕುಮಾರ್. ಬಿ.ಆರ್.ಸೌಮ್ಯ, ಪದ್ಮಾವತಿ,ಚೇತನ್ ಕುಮಾರ್, ಮುರುಗೇಶ್, ಅಮೃತಪ್ರಸಾದ್, ರಮೇಶ್, ಡಾ.ಶಶಿಕಲಾ, ಮಹೇಶ್ವರಿ, ರಾಜೇಂದ್ರ, ಗೌರೀಶ್, ಮಹದೇವಕುಮಾರ್, ಮಂಜೇಶ್ ಕುಮಾರ್, ವರದರಾಜು, ದೊಡ್ಡಮ್ಮ, ನವೀನ್ ಕುಮಾರ್ ಸೇರಿದಂತೆ ಜಿಲ್ಲೆಯ ನಾನಾಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಇತರರು ಭಾಗವಹಿಸಿದ್ದರು.