*ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ ಸರ್ಕಾರದ ಸಹಾಯಧನ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾರತಿ ಅಭಿಪ್ರಾಯ *

ಪಿರಿಯಾಪಟ್ಟಣ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿಯವರು ಮಾಧ್ಯಮದೊಂದಿಗೆ ಮಾತನಾಡಿ, ಇಲಾಖೆಯಿಂದ ಅನುಷ್ಠಾನಗೊಳಿಸುವ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕೋವಿಡ್ – 19 ಸಮಸ್ಯೆಯಿಂದಾಗಿ 2020 – 21ನೇ ಸಾಲಿನಲ್ಲಿ ಇಲಾಖೆಯ ಅನೇಕ ಯೋಜನೆಗಳಿಗೆ ಸರ್ಕಾರದಿಂದ ಬಜೆಟ್ ತುಂಬಾ ಕಡಿಮೆ ಇರುವುದರಿಂದ ಈ ವರ್ಷ ಪ್ರಮುಖವಾಗಿ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾ ಯೋಜನೆ ಅಂದರೆ ಹನಿ ನೀರಾವರಿ ಯೋಜನೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕೃಷಿಗೆ ಮಿತವಾಗಿ ನೀರನ್ನು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಸುವುದು. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90 ರಷ್ಟು ಸಹಾಯಧನ ನೀಡಲಾಗುವುದು. ಯೋಜನೆಗೆ ಸಂಬಂಧಿಸಿದಂತೆ ದಿನಾಂಕ 11-01 -2021 ರ ಸೋಮವಾರ ಬೆಳಗ್ಗೆ 11ಗಂಟೆಗೆ ಇಲಾಖೆ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಇನ್ನೊಂದು ಯೋಜನೆಯಾದ ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುದಾನವಿದ್ದು ಪ್ರತಿಯೊಬ್ಬ ರೈತರು ಇದರ ಸದುಪಯೋಗ
ಪಡೆದುಕೊಳ್ಳಬೇಕು. ಅದೇ ರೀತಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಹಾಯಧನ ಲಭ್ಯವಿದ್ದು, ಕೋವಿಡ್-19 ಕಾರಣದಿಂದ ಈ ವರ್ಷ ಅನುದಾನ ಬಿಡುಗಡೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲಾ ಯೋಜನೆಗಳು ಅನುಷ್ಠಾನಗೊಳ್ಳಲಿದೆ ಪ್ರತಿಯೊಬ್ಬ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈ ಭಾಗದಲ್ಲಿ ತಂಬಾಕನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ. ತಂಬಾಕು ಬೆಳೆಗೆ ಪರ್ಯಾಯವಾಗಿ ತೋಟಗಾರಿಕಾ ಬೆಳೆಗಳನ್ನು ಸರ್ಕಾರದ ಸಹಾಯಧನ ಪಡೆದು ಬೆಳೆಯಿರಿ ಎಂದು ಸಲಹೆ ನೀಡಿದರು. ಪ್ರತಿ ಹೋಬಳಿಯಲ್ಲಿಯೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಿದ್ದಾರೆ ಅವರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಎಲ್ಲಾ ಯೋಜನೆಗಳ ಮಾಹಿತಿಯನ್ನು ನೀಡುತ್ತಾರೆ ಎಂದು ಹೇಳಿದರು.

ಮಾಗಳಿರಾಮೇಗೌಡ ವರದಿಗಾರರು ಪಿರಿಯಾಪಟ್ಟಣ

By admin