ಶಾಸಕರಿಂದ ಕೃಷಿಪರಿಕರ ಪವರ್‌ಟಿಲ್ಲರ್, ರೋಟೋವೇಟರ್ ವಿತರಣೆ

ಚಾಮರಾಜನಗರ: ಕೃಷಿಇಲಾಖೆಯ ಕೃಷಿಯಾಂತ್ರೀಕರಣ ಯೋಜನೆಯಡಿ ತಾಲೂಕಿನ ಹರದನಹಳ್ಳಿ ಹಾಗೂ ಚಂದಕವಾಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ೨೯ ಮಂದಿ ರೈತಫಲಾನುಭವಿಗಳಿಗೆ ನಗರದ ಕೃಷಿಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪವರ್‌ಟಿಲ್ಲರ್, ರೋಟೊವೇಟರ್, ಮುಲ್ಚರ್, ತುಂತುರು ನೀರಾವರಿ ಉಪಕರಣಗಳನ್ನು ವಿತರಣೆ ಮಾಡಿದರು.
ಇದೇವೇಳೆ ಅವರು ಮಾತನಾಡಿ, ಸರಕಾರ ಕೃಷಿಕ್ಷೇತ್ರವನ್ನು ಉತ್ತೇಜಿಸುವ ಸಲುವಾಗಿ ಕೃಷಿಯಂತ್ರೋಪಕರಣಗಳನ್ನು ಸಬ್ಸಿಡಿರೂಪದಲ್ಲಿ ಒದಗಿಸುತ್ತಿದೆ. ಸಾಮಾನ್ಯ ವರ್ಗದವರು ಶೇ ೫೦, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರು ಶೇ ೯೦ ರಷ್ಟು ಸಬ್ಸಿಡಿಯಲ್ಲಿ ಯಂತ್ರ ಪಡೆದು, ಕೃಷಿಚಟುವಟಿಕೆ ಕೈಗೊಳ್ಳಬೇಕು, ತಾಲೂಕುಮಳೆಯಾಶ್ರಿತವಾಗಿದ್ದು, ನೀರನ್ನು ಮಿತಬಳಕೆ ಮಾಡಲು ಮುಂದಿನದಿನಗಳಲ್ಲಿ ಇಲಾಖೆಯವರು ಹನಿನೀರಾವರಿ ಯಂತ್ರಗಳನ್ನು ಖರೀದಿಸಿ, ವಿತರಣೆ ಮಾಡುವಂತೆ ಸೂಚಿಸಿದರು.
ತಾ.ಪಂ. ಮಾಜಿ ಸದಸ್ಯ ಪಿ.ಕುಮಾರ್‌ನಾಯಕ್, ಜಂಟಿಕೃಷಿನಿರ್ದೇಶಕಿ ಎಚ್.ಟಿ.ಚಂದ್ರಕಲಾ, ಉಪನಿರ್ದೇಶಕ ಸೋಮಶೇಖರ್, ಸಹಾಯಕ ಕೃಷಿನಿರ್ದೇಶಕ ಸಂದೀಪ್, ತಾಂತ್ರಿಕಅಧಿಕಾರಿ ಜಯಶಂಕರ್, ಸಿ.ವೀರಭದ್ರಸ್ವಾಮಿ ಸೇರಿದಂತೆ ಸಿಬ್ಬಂದಿ, ರೈತಫಲಾನುಭವಿಗಳು ಹಾಜರಿದ್ದರು.