ಗುಂಡ್ಲುಪೇಟೆ: ಚುನಾವಣೆಯಲ್ಲಿ ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದ ವಿದ್ಯಾವಂತ ಯುವಕರು ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಹೆಚ್ಚು ಬರುತ್ತಿದ್ದಾರೆ. ಪದವೀಧರರು, ಶಿಕ್ಷಕರು, ವಕೀಲರು, ಪಿಎಚ್ಡಿ ಪದವೀಧರರು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿವಿಧ ಪಕ್ಷದ ಬೆಂಬಲಿತರಾಗಿ ಸ್ಪರ್ಧೆ ಮಾಡಿ ವಿಜೇತರಾಗಿದ್ದಾರೆ.

ನೆರೆಯ ರಾಜ್ಯ ಕೇರಳದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ತಿರುವನಂತಪುರದ ಮೇಯರ್ ಆಗಿ ಕೇವಲ 21 ವರ್ಷದ ಆರ್ಯ ರಾಜೇಂದ್ರನ್ ಆಯ್ಕೆ ಆಗಿದ್ದರು. ಇವರು ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಇಂತಹುದೇ ಪ್ರಕರಣಗಳನ್ನು ಉದಾಹರಣೆಯಾಗಿಟ್ಟುಕೊಂಡು ಯುವಕರು ಚುನಾವಣೆ ಎದುರಿಸುವ ಪ್ರಯತ್ನ ಮಾಡಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬೇಸತ್ತು ಕೆಲ ಯುವಕರು ರಾಜಕೀಯ ಪ್ರವೇಶ ಮಾಡಿದರೆ, ಕೆಲವರು ವಂಶ ಪಾರಂಪರ್ಯವಾಗಿ ಉಳಿಸಿಕೊಳ್ಳಲು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.

ಕೆಲ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದ್ದರಿಂದ ಗ್ರಾಮದವರೇ ವಿದ್ಯಾವಂತರಾದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತದೆ. ಅವಿದ್ಯಾವಂತರಾದರೆ ಅಧಿಕಾರಿಗಳು ಮತ್ತು ಪಂಚಾಯತಿ ಹಿಡಿತ ಹೊಂದಿರುವವರು ಹೇಳುವುದಕ್ಕೆ ತಲೆ ಆಡಿಸುತ್ತಾರೆ ಎಂದು ವಿದ್ಯಾವಂತರನ್ನು ಚುನಾವಣೆಗೆ ನಿಲ್ಲುಸಿರುವ ಸನ್ನಿವೇಶಗಳು ಇದೆ.

ಕೆಲವೊಂದು ಗ್ರಾಮ ಪಂಚಾಯತಿಗಳು ಪಟ್ಟಭದ್ರ ಹಿತಶಕ್ತಿಗಳ ಹಿಡಿತದಲ್ಲಿದೆ. ಅವರು ತೀರ್ಮಾನ ಮಾಡಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಅವರೇ ತೀರ್ಮಾನಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಂಚಾಯತಿ ಸೌಲಭ್ಯಗಳು ಬೇರೆ ವ್ಯಕ್ತಿಗೆ ಸಿಗದಂತೆ ಎಚ್ಚರ ವಹಿಸುತ್ತಾರೆ. ಧ್ವನಿ ಇಲ್ಲದವರಂತು ಕೇಳಲು ಅಸಾಧ್ಯ ಆದ್ದರಿಂದ ಶಿಕ್ಷಿತರು ಪ್ರಶ್ನೆ ಮಾಡುತ್ತಾರೆ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.

ಸರ್ಕಾರಿ ಸೌಲಭ್ಯಗಳು ಭೀಮನಬೀಡು ಗ್ರಾಮದ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅದನ್ನು ಸಮರ್ಪಕವಾಗಿ ದೊರಕುವಂತಾಗಬೇಕು. ಜೊತೆಗೆ ಚರಂಡಿ, ಶೌಚಾಲಯ, ರಸ್ತೆ ಯಾವುದು ಸಹ ಉತ್ತಮ ರೀತಿಯಲ್ಲಿರದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಕಣ್ಣಾರೆ ಕಂಡು ಸ್ಥಳೀಯರಿಗೆ ಸೌಲಭ್ಯ ಒದಗಿಸಿ. ಅವರನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಪಂಗೆ ಸ್ಪರ್ಧಿಸಿದ್ದಾಗಿ ಭೀಮನಬೀಡು ಗ್ರಾಮದ ಪಿಎಚ್ ಡಿ ಪದವೀಧರ ಬಿ.ಜಿ. ಶಿವಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು.

ಯುವ ವಿದ್ಯಾವಂತರು ರಾಜಕೀಯಕ್ಕೆ ಬಂದಾಗ ಮಾತ್ರವೇ ಪಂಚಾಯತಿಯಲ್ಲಿ ಏನೆಲ್ಲ ಸೌಲಭ್ಯಗಳು ಇದೆ ಎಂದು ತಿಳಿಯುತ್ತದೆ. ಹಿಂದಿನವರು ಸೌಲಭ್ಯಗಳ ಬಗ್ಗೆಯೇ ತಿಳಿಸುತ್ತಿರಲಿಲ್ಲ, ಕೆಲ ವಿದ್ಯಾವಂತರು ಪಂಚಾಯತಿ ಯಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಿಳಿಸಿದ್ದರು. ಆದ್ದರಿಂದ ಹೆಚ್ಚಿನ ಯುವಕರು, ಉತ್ಸಾಹಗಳು , ಕೆಲಸ ಮಾಡುವ ಮನಸ್ಸುಳ್ಳವರು ರಾಜಕೀಯಕ್ಕೆ ಬರಬೇಕು ಎಂದು ವಕೀಲ ಸಂಪತ್ತು ತಿಳಿಸಿದರು.

ಚುನಾವಣೆಯಲ್ಲಿ ಗೆಲುವ ಸಾಧಿಸಿದ ಪದವೀಧರರು:

– ಭೀಮನಬೀಡು ಗ್ರಾಮದ ಬಿ.ಜಿ. ಶಿವಕುಮಾರ್ (ಪಿಎಚ್ ಡಿ)

– ಚೆನ್ನಂಜಯ್ಯನಹುಂಡಿ ಗ್ರಾಮದ ಪ್ರಭು ಸ್ವಾಮಿ (ಎಂ.ಎ)

– ಪಡಗೂರು ಗ್ರಾಮದ ಪ್ರೀಯ ( ಎಲ್ ಎಲ್ ಬಿ , ಎಂ.ಲ್ಯಾಬ್)

– ಕೋಟೆಕೆರೆ ರಂಗನಾಥ (ಲಾಯರ್)

– ಶ್ಯಾನಡ್ರಹಳ್ಳಿ ರಾಜೇಂದ್ರ (ಎಂ.ಎ, ಬಿಇಡ್,)

– ಶಿಂಡನಪುರ ಗ್ರಾಮದ ಎಸ್ ಮಹದೇವ ಸ್ವಾಮಿ (ಬಿ.ಎಸ್ಸಿ ಬಿ.ಎಡ್.)

– ಹಂಗಳ ಗ್ರಾಮದ ನಂದೀಶ್ (ಎಂ.ಬಿ.ಎ )

– ಕುಲಗಾಣ ಗ್ರಾಮದ ನಂಜುಂಡಸ್ವಾಮಿ (ಎಂ.ಎ ಇತಿಹಾಸ)

– ಲಕ್ಕೂರು ಮಂಜುನಾಥ್ ಲಕ್ಕೂರು( ಎಂ.ಎ)

– ಹೊರೆಯಾಲ ಗ್ರಾಮದ ಮಹೇಶ (ಎಂ.ಎ)

– ಮದ್ದೂರು ಗ್ರಾಮದ ಭಾಗ್ಯಶ್ರಿ (ಎಂ.ಎ, ಬಿ.ಎಡ್)

ವರದಿ: ಬಸವರಾಜು ಎಸ್ ಹಂಗಳ

By admin